
ಬೆಂಗಳೂರು: ಟನಲ್ ರಸ್ತೆ ಯೋಜನೆ ಇದೀಗ ‘ಮಹಿಳಾ ಸಬಲೀಕರಣ’ ಯೋಜನೆಯಾಗಿ ಬದಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ಟನಲ್ ರಸ್ತೆ ಯೋಜನೆಗೆ ಮಹಿಳಾ ಉದ್ಯಮಿಗಳು ಬೆಂಬಲ ನೀಡಬೇಕು ಎಂದು ಮುಖ್ಯಮಂತ್ರಿ ಹೇಳಿರುವುದನ್ನು ಉಲ್ಲೇಖಿಸಿರುವ ತೇಜಸ್ವಿ ಸೂರ್ಯ, ‘ಮಹಿಳಾ ಸಬಲೀಕರಣದ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ, ಮೊದಲು ತಮ್ಮದೇ ಸಚಿವ ಸಂಪುಟದಲ್ಲಿ ಕನಿಷ್ಠ ಒಬ್ಬ ಮಹಿಳೆಗೆ ಸ್ಥಾನ ನೀಡಬಹುದಲ್ಲವೇ?’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಪ್ರತಿ ವಾರವೂ ಈ ಯೋಜನೆಯನ್ನು ಸಮರ್ಥಿಸಲು ಹೊಸಹೊಸ ಕಾರಣಗಳನ್ನು ನೀಡಲಾಗುತ್ತಿದೆ. ಆರಂಭದಲ್ಲಿ ಬೆಂಗಳೂರಿಗೆ ಹೆಚ್ಚು ರಸ್ತೆಗಳು ಹಾಗೂ ಕಾರುಗಳ ಅಗತ್ಯವಿದೆ, ಇಲ್ಲದಿದ್ದರೆ ಪುರುಷರಿಗೆ ಮದುವೆಗೆ ಹುಡುಗಿಯರು ಸಿಗುವುದಿಲ್ಲ ಎಂಬ ರೀತಿಯಲ್ಲಿ ಯೋಜನೆಯನ್ನು ಸಮರ್ಥಿಸಲಾಗಿತ್ತು. ಇದೀಗ ಅದಕ್ಕೆ ‘ಮಹಿಳಾ ಸಬಲೀಕರಣ’ದ ಹೆಸರನ್ನು ನೀಡಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.
‘ಮುಂದೆ ರಾಷ್ಟ್ರೀಯ ಭದ್ರತೆಯ ಹೆಸರನ್ನೂ ನೀಡಬಹುದೇ? ರಾಜ್ಯದ ರಹಸ್ಯ ದಾಖಲೆಗಳನ್ನು ಭೂಗತವಾಗಿ ಸಾಗಿಸಲು ಟನಲ್ ನಿರ್ಮಿಸುತ್ತಿದ್ದೇವೆ ಎಂದು ಹೇಳಬಹುದೇ?’ ಎಂದು ತೇಜಸ್ವಿ ಸೂರ್ಯ ವ್ಯಂಗ್ಯವಾಡಿದ್ದಾರೆ.
ಕೆಟ್ಟ ಯೋಜನೆಯನ್ನು ಸಮರ್ಥಿಸಲು ಹೊಸಹೊಸ ಕಾರಣಗಳನ್ನು ಹುಡುಕುವ ಆತುರವೇ ಇದೀಗ ಯೋಜನೆಗಿಂತ ಹೆಚ್ಚು ಮನರಂಜನೀಯವಾಗಿದೆ ಎಂದು ಅವರು ಟೀಕಿಸಿದ್ದಾರೆ.







