
ವಿಧುಶೇಖರ ಭಾರತಿ ಎಂಬ ಯೋಗಪಟ್ಟವನ್ನು ನೀಡಿರುವುದರ ಹಿಂದಿನ ಅರ್ಥವನ್ನು ಶ್ರೀಗಳು ವಿವರಿಸಿದ್ದಾರೆ. ತಮ್ಮ ಪರಮಗುರುಗಳಾದ ಜಗದ್ವಿಖ್ಯಾತ ಚಂದ್ರಶೇಖರ ಭಾರತಿ ಅವರ ಮೇಲಿನ ಅಪಾರ ಗೌರವ ಮತ್ತು ಅಭಿಮಾನದಿಂದಲೇ ಈ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಚಂದ್ರಶೇಖರ ಭಾರತಿ ಎಂಬ ಹೆಸರನ್ನೇ ಉತ್ತರಾಧಿಕಾರಿಗೆ ನೀಡಬೇಕೆಂಬ ಅಭಿಪ್ರಾಯವಿದ್ದರೂ, ತಮ್ಮ ಪರಮಗುರುಗಳ ಹೆಸರನ್ನು ನೇರವಾಗಿ ತಮ್ಮ ಶಿಷ್ಯರಿಗೆ ನೀಡುವುದು ಸೂಕ್ತವಲ್ಲ ಎಂಬ ಕಾರಣದಿಂದ ವಿಭಿನ್ನ ಪರ್ಯಾಯ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಸಂಸ್ಕೃತದಲ್ಲಿ ಚಂದ್ರನಿಗೆ ‘ವಿಧು’ ಎಂಬುದು ಪರ್ಯಾಯ ಪದವಾಗಿದೆ. ಆದ್ದರಿಂದ, ಚಂದ್ರಶೇಖರ ಭಾರತಿ ಎಂಬ ಹೆಸರಿನ ಅರ್ಥ ಮತ್ತು ಭಾವವನ್ನು ಉಳಿಸಿಕೊಂಡು ‘ವಿಧುಶೇಖರ ಭಾರತಿ’ ಎಂಬ ಹೆಸರನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದಕ್ಕೆ ಬೇರೆ ಯಾವುದೇ ಅರ್ಥ ಅಥವಾ ವ್ಯಾಖ್ಯಾನವನ್ನು ಕಲ್ಪಿಸುವ ಅಗತ್ಯವಿಲ್ಲ ಎಂದು ತಿಳಿಸಿರುವ ಶ್ರೀಗಳು, ತಮ್ಮ ಪರಮಗುರುಗಳಾದ ಚಂದ್ರಶೇಖರ ಭಾರತಿಗಳನ್ನು ಸ್ಮರಿಸುವ ಉದ್ದೇಶದಿಂದಲೇ ಈ ಹೆಸರು ನೀಡಲಾಗಿದೆ ಎಂದು ಹೇಳಿದ್ದಾರೆ.
ವಿಧುಶೇಖರ ಭಾರತಿ ಸ್ವಾಮೀಜಿಗಳು ಅತ್ಯಂತ ಯೋಗ್ಯರಾಗಿದ್ದು, ಶಾಸ್ತ್ರಗಳಲ್ಲಿ ವಿಶೇಷ ಪಾಂಡಿತ್ಯ ಹೊಂದಿದ್ದಾರೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ಐದಾರು ವರ್ಷಗಳಿಂದ ಶಾಸ್ತ್ರಾಭ್ಯಾಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಅವರು, ಯಾವುದೇ ಲೌಕಿಕ ವ್ಯವಹಾರಗಳಲ್ಲಿ ತೊಡಗಿಕೊಳ್ಳದೆ, ಸಂಪೂರ್ಣ ಏಕಾಗ್ರತೆಯಿಂದ ಅಧ್ಯಯನ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಅವರ ಯೋಗ್ಯತೆ, ಪಾಂಡಿತ್ಯ ಮತ್ತು ವೈರಾಗ್ಯವನ್ನು ಪರಿಗಣಿಸಿ, ಜಗನ್ಮಾತೆಯ ಅಪ್ಪಣೆಯಂತೆ ಅವರಿಗೆ ದೀಕ್ಷೆ ನೀಡಿ ಮಠದ ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಮಹತ್ವದ ಕಾರ್ಯದಲ್ಲಿ ಭಕ್ತರು ಮತ್ತು ಸಾರ್ವಜನಿಕರ ಸಹಕಾರವೂ ಅತ್ಯಗತ್ಯವಾಗಿದೆ ಎಂದು ತಿಳಿಸಿ, ಎಲ್ಲರಿಗೂ ತಮ್ಮ ಪರಿಪೂರ್ಣ ಆಶೀರ್ವಾದಗಳನ್ನು ನೀಡಿದ್ದಾರೆ. ವಿಧುಶೇಖರ ಭಾರತಿ ಸ್ವಾಮೀಜಿಗಳಿಗೆ ಜಗನ್ಮಾತೆ ಸಂಪೂರ್ಣ ಶಕ್ತಿ ಮತ್ತು ಸಾಮರ್ಥ್ಯವನ್ನು ನೀಡಿ, ಮಠವನ್ನು ಇನ್ನಷ್ಟು ಉನ್ನತ ಸ್ಥಿತಿಗೆ ಕೊಂಡೊಯ್ಯುವ ಶಕ್ತಿಯನ್ನು ನೀಡಲಿ ಎಂದು ಶ್ರೀಗಳು ಪ್ರಾರ್ಥಿಸಿದ್ದಾರೆ.







