Sri Vidhushekhara Bharati Mahaswamiji | ಭಗವದ್ಗೀತೆಯ ಪಠಣದಿಂದ ವಿಶೇಷ ಫಲ: ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ


ಶೃಂಗೇರಿ: ಭಗವದ್ಗೀತೆಯಲ್ಲಿ ಜೀವನದ ತತ್ವವನ್ನು ಅರ್ಥಮಾಡಿಕೊಳ್ಳಲು ಅಗತ್ಯವಿರುವ ಎಲ್ಲ ವಿಚಾರಗಳನ್ನು ಒಳಗೊಂಡಿದ್ದು, ಅದರ ಆಳವಾದ ಅರ್ಥವನ್ನು ತಿಳಿದುಕೊಳ್ಳಲು ಸಾಧ್ಯವಾಗದವರಿಗೂ ಗೀತೆಯ ಪಾರಾಯಣದ ಮೂಲಕ ವಿಶೇಷ ಫಲ ದೊರೆಯುತ್ತದೆ ಎಂದು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.

ಪದ್ಮ ಪುರಾಣದಲ್ಲಿನ ‘ಗೀತಾ ಮಹಾತ್ಮ್ಯ’ದಲ್ಲಿ ಭಗವದ್ಗೀತೆಯ ಪ್ರತಿಯೊಂದು ಅಧ್ಯಾಯದ ಮಹತ್ವವನ್ನು ವಿವಿಧ ಉಪಾಖ್ಯಾನಗಳ ಮೂಲಕ ವಿವರಿಸಲಾಗಿದೆ. ಪಾರ್ವತಿದೇವಿಯ ಪ್ರಶ್ನೆಗೆ ಶಿವನು, ವಿಷ್ಣು ಮತ್ತು ಲಕ್ಷ್ಮೀದೇವಿಯ ನಡುವಿನ ಸಂವಾದವನ್ನು ವಿವರಿಸುವ ಮೂಲಕ ಗೀತೆಯ ಮಹತ್ವವನ್ನು ತಿಳಿಸುತ್ತಾನೆ ಎಂದು ಸ್ವಾಮೀಜಿ ಹೇಳಿದರು.

ವಿಷ್ಣುವು ಆದಿಶೇಷನ ಮೇಲೆ ಶಯನಿಸಿರುವುದನ್ನು ಕಂಡ ಲಕ್ಷ್ಮೀದೇವಿ, ಜಗತ್ತಿನ ಪರಿಪಾಲನೆಯ ಜವಾಬ್ದಾರಿ ಹೊಂದಿರುವ ನೀವು ಸದಾ ನಿದ್ರಿಸುತ್ತಿದ್ದರೆ ಕಾರ್ಯ ಹೇಗೆ ನಡೆಯುತ್ತದೆ ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ವಿಷ್ಣು, ತಾನು ನಿದ್ರಿಸುತ್ತಿಲ್ಲ, ತನ್ನ ನೈಜವಾದ ಸಚ್ಚಿದಾನಂದ ಸ್ವರೂಪವಾದ ಅದ್ವೈತ ಬ್ರಹ್ಮತತ್ವದ ಅನುಸಂಧಾನದಲ್ಲಿದ್ದೇನೆ ಎಂದು ವಿವರಿಸುತ್ತಾನೆ.

ಜಗತ್ತಿನ ಪರಿಪಾಲನೆ ಸೇರಿದಂತೆ ವಿವಿಧ ಕಾರ್ಯಗಳನ್ನು ನಿರ್ವಹಿಸುವುದಕ್ಕಾಗಿ ಧರಿಸಿರುವ ರೂಪವು ತನ್ನ ವಾಸ್ತವ ಸ್ವರೂಪವಲ್ಲ; ಪರಬ್ರಹ್ಮವೇ ನಿಜವಾದ ಸ್ವರೂಪ. ಇದೇ ಅದ್ವಿತೀಯ ತತ್ವವನ್ನು ತಿಳಿಸುವ ಉದ್ದೇಶದಿಂದ ಭಗವದ್ಗೀತೆ ಪ್ರಕಟವಾಗಿದೆ ಎಂದು ಸ್ವಾಮೀಜಿ ವಿವರಿಸಿದರು.

ಭಗವದ್ಗೀತೆಯ ಪಠಣ ಮತ್ತು ಅದರ ತತ್ವದ ಅನುಸಂಧಾನದಿಂದ ವಿಶೇಷವಾದ ಫಲ ದೊರೆಯುತ್ತದೆ. ಈ ಮಹತ್ವವನ್ನು ಶಂಕರ ಭಗವತ್ಪಾದರು ಶ್ರುತಿ, ಸ್ಮೃತಿ ಹಾಗೂ ಪುರಾಣಗಳ ಆಧಾರದ ಮೇಲೆ ಪರಿಶೀಲಿಸಿ, ಭಗವದ್ಗೀತೆಗೆ ಭಾಷ್ಯ ರಚಿಸುವ ಮೂಲಕ ಜನರಿಗೆ ತತ್ವಜ್ಞಾನವನ್ನು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಲೌಕಿಕ ಜೀವನದಲ್ಲಿ ಉತ್ತಮ ಸ್ಥಿತಿಯನ್ನು ಪಡೆಯಲು ಹಾಗೂ ಆತ್ಮಜ್ಞಾನದೆಡೆಗೆ ಸಾಗಲು ಅಗತ್ಯವಾದ ಸಾಧನಗಳನ್ನೂ ಭಗವದ್ಗೀತೆ ಉಪದೇಶಿಸುತ್ತದೆ. ಆದ್ದರಿಂದ ಭಗವದ್ಗೀತೆಯ ಪಠಣ ಮತ್ತು ಅಧ್ಯಯನ ಎಲ್ಲೆಡೆ ನಡೆಯಬೇಕು ಎಂದು ಶ್ರೀಗಳು ಕರೆ ನೀಡಿದರು.


Advertisement

Recent Posts

error: Content is protected !!
Scroll to Top