Karntaka Politics

Bangalore News / ಬೆಂಗಳೂರು ಸುದ್ದಿ, Karntaka Politics, Political News, Uncategorized

PM Narendra Modi | ಪಿಎಂ ಸ್ವನಿಧಿಯಿಂದ ನಿಂಗಮ್ಮ ಅವರ ವ್ಯಾಪಾರಕ್ಕೆ ಹೊಸ ಚೈತನ್ಯ

ಬೆಂಗಳೂರು: ಪಿಎಂ ಸ್ವನಿಧಿ ಯೋಜನೆಯ ನೆರವಿನಿಂದ ಬೆಂಗಳೂರಿನ ಬೀದಿ ವ್ಯಾಪಾರಿ ಟಿ.ಎಸ್. ನಿಂಗಮ್ಮ ಅವರು ತಮ್ಮ ವ್ಯಾಪಾರವನ್ನು ವಿಸ್ತರಿಸಿಕೊಂಡಿದ್ದಾರೆ. ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ನಿಂಗಮ್ಮ ಅವರ ಯಶೋಗಾಥೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ. ನಿಂಗಮ್ಮ ಅವರು ಆರಂಭದಲ್ಲಿ ₹10,000 ಸಾಲ ಪಡೆದು, ಬಳಿಕ ₹20,000 ಹಾಗೂ ₹50,000 ಸಾಲ ಪಡೆದು ವ್ಯಾಪಾರವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಿದ್ದಾರೆ. ಸಾಲವನ್ನು ಸಕಾಲದಲ್ಲಿ ಮರುಪಾವತಿಸುವ ಮೂಲಕ ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಂಡಿದ್ದಾರೆ. ನಿಂಗಮ್ಮ ಅವರ ಯಶೋಗಾಥೆ ಪಿಎಂ ಸ್ವನಿಧಿ ಯೋಜನೆಯ ಪ್ರಯೋಜನ ಪಡೆದ ಬೀದಿ ವ್ಯಾಪಾರಿಗಳಿಗೆ ಉತ್ತಮ ಉದಾಹರಣೆಯಾಗಿದೆ.

Bangalore News / ಬೆಂಗಳೂರು ಸುದ್ದಿ, Karntaka Politics

Pramod Srinivas | ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಪ್ರಮೋದ್ ಶ್ರೀನಿವಾಸ್ ನೇಮಕ

ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲಾ ಭಾರತೀಯ ಜನತಾ ಪಕ್ಷದ (ಬಿಜೆಪಿ) ಯುವ ಮೋರ್ಚಾ ಅಧ್ಯಕ್ಷರಾಗಿ ಪ್ರಮೋದ್ ಶ್ರೀನಿವಾಸ್ ಅವರನ್ನು ನೇಮಕ ಮಾಡಲಾಗಿದೆ. ಇತ್ತೀಚೆಗಷ್ಟೇ ಪ್ರಮೋದ್ ಶ್ರೀನಿವಾಸ್ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ಶಿಷ್ಯ ಬಳಗದಲ್ಲಿ ಗುರುತಿಸಿಕೊಂಡಿದ್ದ ಪ್ರಮೋದ್ ಶ್ರೀನಿವಾಸ್, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ಆಂತರಿಕ ಬೆಳವಣಿಗೆಗಳಿಂದ ಅಸಮಾಧಾನಗೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದೀಗ ಮತ್ತೆ ಬಿಜೆಪಿಗೆ ಮರಳಿರುವ ಪ್ರಮೋದ್ ಶ್ರೀನಿವಾಸ್ ಅವರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದ್ದು, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಪಕ್ಷಕ್ಕೆ ಮರಳಿದ ಕೆಲವೇ ದಿನಗಳಲ್ಲಿ ಪ್ರಮುಖ ಜವಾಬ್ದಾರಿ ದೊರೆತಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಯುವ ಮೋರ್ಚಾ ಅಧ್ಯಕ್ಷರಾಗಿ ಪ್ರಮೋದ್ ಶ್ರೀನಿವಾಸ್ ಅವರು ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಹಾಗೂ ಯುವ ಕಾರ್ಯಕರ್ತರನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.

Bangalore News / ಬೆಂಗಳೂರು ಸುದ್ದಿ, Karntaka Politics

Dr A Ramya Ramesh | ಡಾ. ಎ. ರಮ್ಯಾ ರಮೇಶ್‌ಗೆ ‘The Great Daughter of India’ ಗೌರವ | Kannadigara Vani

ಬೆಂಗಳೂರು: ಜೆಡಿಎಸ್ ಬೆಂಗಳೂರು ನಗರ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ಅವರ ಧರ್ಮಪತ್ನಿ, HMR Group of Institutionsನ CEO ಹಾಗೂ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಡಾ. ಎ. ರಮ್ಯಾ ರಮೇಶ್ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಶ್ರೇಷ್ಠ ಸೇವೆ, ಸಾಧನೆ ಹಾಗೂ ಸಮಾಜಕ್ಕೆ ನೀಡುತ್ತಿರುವ ಅಮೂಲ್ಯ ಕೊಡುಗೆಗಳನ್ನು ಗುರುತಿಸಿ ಪ್ರತಿಷ್ಠಿತ ‘The Great Daughter of India’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಈ ಪ್ರತಿಷ್ಠಿತ ಗೌರವವನ್ನು ಸ್ವೀಕರಿಸಿದ ಡಾ. ಎ. ರಮ್ಯಾ ರಮೇಶ್ ಅವರಿಗೆ ಕುಟುಂಬಸ್ಥರು ಹಾಗೂ HMR ಕುಟುಂಬದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ. ಅವರ ಪರಿಶ್ರಮ, ಸಮರ್ಪಣೆ ಹಾಗೂ ಸಾಧನೆಯ ಪಯಣ ಮತ್ತಷ್ಟು ಎತ್ತರಕ್ಕೆ ಸಾಗಲಿ, ಸಮಾಜಕ್ಕೆ ಇನ್ನಷ್ಟು ಪ್ರೇರಣೆಯಾಗಲಿ ಎಂದು ಶುಭ ಹಾರೈಸಲಾಗಿದೆ.

Karntaka Politics, Political News

B Nagendra | ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ; ಸುದ್ದಿಗೋಷ್ಠಿಯಲ್ಲಿ ಕಣ್ಣೀರು!

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಮತ್ತೆ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿದ್ದು, ಈ ವಿವಾದದ ನಡುವೆಯೇ ಸಚಿವ ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ನಾಗೇಂದ್ರ, ಮಾತನಾಡುವ ವೇಳೆ ಭಾವುಕರಾಗಿ ಕಣ್ಣೀರಿಟ್ಟರು. ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ ನಾಗೇಂದ್ರ, ತಾನು ಯಾವುದೇ ತಪ್ಪು ಮಾಡಿಲ್ಲ, ರಾಜಕೀಯವಾಗಿ ತನ್ನನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡದಂತೆ ಸೂಚಿಸಿದ್ದರೂ, ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ತಾನು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದರು. ಏನಿದು ವಾಲ್ಮೀಕಿ ನಿಗಮದ ಹಗರಣ?ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ಸೇರಿದ ಹಣದ ಅಕ್ರಮ ವರ್ಗಾವಣೆ ಪ್ರಕರಣವು 2024ರಲ್ಲಿ ಬೆಳಕಿಗೆ ಬಂದಿತ್ತು. ನಿಗಮದ ಅಧಿಕಾರಿ ಪಿ. ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಸಿಕ್ಕಿದ ಡೆತ್ ನೋಟ್‌ನಲ್ಲಿ ಹಣಕಾಸಿನ ಅಕ್ರಮಗಳ ಬಗ್ಗೆ ಆರೋಪಗಳು ಕೇಳಿಬಂದಿದ್ದವು. ತನಿಖಾ ಸಂಸ್ಥೆಗಳ ಪ್ರಕಾರ, ನಿಗಮದ ಖಾತೆಯಿಂದ ಸುಮಾರು ₹89.63 ಕೋಟಿ ಹಣವನ್ನು ನಕಲಿ ದಾಖಲೆಗಳು ಹಾಗೂ ಬ್ಯಾಂಕಿಂಗ್ ಸೂಚನೆಗಳ ಮೂಲಕ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬ ಆರೋಪವಿದೆ. ನಂತರ ಈ ಹಣವನ್ನು ಹಲವು ಖಾತೆಗಳ ಮೂಲಕ ವರ್ಗಾವಣೆ ಮಾಡಿ ನಗದು, ಚಿನ್ನಾಭರಣ ಸೇರಿದಂತೆ ವಿವಿಧ ರೂಪಗಳಲ್ಲಿ ಬಳಸಲಾಗಿದೆ ಎಂದು ತನಿಖಾ ಸಂಸ್ಥೆಗಳು ಹೇಳಿವೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವೂ ತನಿಖೆ ನಡೆಸಿದ್ದು, 2024ರಲ್ಲಿ ಸಲ್ಲಿಸಿದ ತನ್ನ ಪ್ರಾಸಿಕ್ಯೂಷನ್ ದೂರಿನಲ್ಲಿ ಬಿ. ನಾಗೇಂದ್ರ ಅವರ ಹೆಸರನ್ನು ಪ್ರಮುಖ ಆರೋಪಿಯಾಗಿ ಉಲ್ಲೇಖಿಸಿತ್ತು. ಆದರೆ, ಇವು ತನಿಖಾ ಸಂಸ್ಥೆಗಳ ಆರೋಪಗಳಾಗಿದ್ದು, ನ್ಯಾಯಾಲಯದಲ್ಲಿ ಅಂತಿಮವಾಗಿ ಸಾಬೀತಾಗಬೇಕಿದೆ. ರೆಡ್ಡಿ–ಶ್ರೀರಾಮುಲುಗೆ ನಾಗೇಂದ್ರ ಸವಾಲ್ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿದ್ದ ನಾಗೇಂದ್ರ, ತಮ್ಮ ವಿರುದ್ಧ ರಾಜಕೀಯವಾಗಿ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಹೇಳುತ್ತಾ, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದರು. ತಮ್ಮ ವಿರುದ್ಧ ಮಾಡಲಾಗುತ್ತಿರುವ ಆರೋಪಗಳಿಗೆ ದಾಖಲೆಗಳೊಂದಿಗೆ ಉತ್ತರ ನೀಡುವುದಾಗಿ ಸವಾಲು ಹಾಕಿದರು. ವಾಲ್ಮೀಕಿ ಹಗರಣದ ಆರೋಪದ ನಡುವೆ ಮತ್ತೊಮ್ಮೆ ರಾಜೀನಾಮೆ ನೀಡಿದ ನಾಗೇಂದ್ರ; ಕಣ್ಣೀರಿನ ನಡುವೆ ರಾಜಕೀಯ ಎದುರಾಳಿಗಳಿಗೆ ನೇರ ಸವಾಲ್ — ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾದ ಬೆಳವಣಿಗೆ!

Karntaka Politics, Political News, Popular News

Siddaramaiah | ಕಾಂಗ್ರೆಸ್‌ನಲ್ಲಿ ‘ಗೇಮ್’ ಶುರು? Kannadigara Vani

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಇತ್ತೀಚಿನ ಬೆಳವಣಿಗೆಗಳು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರಿಸಿದ ಬಳಿಕ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್‌ನ ಹಲವು ನಾಯಕರೊಂದಿಗೆ ಸಿದ್ದರಾಮಯ್ಯ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕೆಲ ನಾಯಕರ ಭೇಟಿಗೂ ನಿರಾಕರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರಿಂದ ಸಿದ್ದರಾಮಯ್ಯ ಮುಂದಿನ ರಾಜಕೀಯ ನಡೆ ಏನು ಎಂಬ ಪ್ರಶ್ನೆ ಮೂಡಿದೆ. ಇದರ ನಡುವೆ ಇತ್ತೀಚೆಗೆ ಖಾಸಗಿ ಹೋಟೆಲ್‌ನಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಿದ್ದರಾಮಯ್ಯ ಭೇಟಿಯಾಗಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿತ್ತು. ಆದರೆ ಈ ಭೇಟಿಗೆ ಸಂಬಂಧಿಸಿದ ಯಾವುದೇ ಅಧಿಕೃತ ಫೋಟೋಗಳು ಹೊರಬಂದಿರಲಿಲ್ಲ. ಆದರೆ ಇದೀಗ ಸರಣಿ ರಾಜಕೀಯ ಭೇಟಿಗಳು ಕುತೂಹಲಕ್ಕೆ ಕಾರಣವಾಗಿವೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಸಿದ್ದರಾಮಯ್ಯ ಭೇಟಿಯಾಗಿರುವುದು ಗಮನ ಸೆಳೆದಿದೆ. ಭೇಟಿ ಆಕಸ್ಮಿಕವಾಗಿದ್ದರೂ, ಇಬ್ಬರು ಹಿರಿಯ ನಾಯಕರ ಭೇಟಿಗೆ ರಾಜಕೀಯ ಮಹತ್ವ ಕಲ್ಪಿಸಲಾಗುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕ ಸಿ.ಟಿ. ರವಿ ಅವರು ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ‘ಕಾವೇರಿ’ಗೆ ತೆರಳಿ ಮಾತುಕತೆ ನಡೆಸಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಉಭಯ ಪಕ್ಷಗಳ ನಾಯಕರು ಭೇಟಿಯಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆದಿರಬಹುದು ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಇದೇ ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಿದ್ದರಾಮಯ್ಯ ಭೇಟಿಯಾಗಿರುವುದು ಕೂಡ ಗಮನ ಸೆಳೆದಿದೆ. ಇಬ್ಬರೂ ಉಭಯ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಈ ಭೇಟಿಯ ಹಿಂದಿನ ರಾಜಕೀಯ ಲೆಕ್ಕಾಚಾರವೇನು ಎಂಬ ಪ್ರಶ್ನೆ ಮೂಡಿದೆ. “ರಾಜಕಾರಣದಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಶಾಶ್ವತ ಮಿತ್ರರೂ ಇಲ್ಲ” ಎಂಬ ಮಾತಿನಂತೆ, ಸಿದ್ದರಾಮಯ್ಯ ಅವರ ಇತ್ತೀಚಿನ ರಾಜಕೀಯ ಸಂಪರ್ಕಗಳು ಹೊಸ ಸಮೀಕರಣದ ಮುನ್ಸೂಚನೆಯೇ ಎಂಬ ಚರ್ಚೆ ಜೋರಾಗಿದೆ. ಸಿದ್ದರಾಮಯ್ಯ ಯಾವುದಾದರೂ ರಾಜಕೀಯ ದಾಳ ಉರುಳಿಸಲು ಸಿದ್ಧತೆ ನಡೆಸುತ್ತಿದ್ದಾರಾ? ಅಥವಾ ಇವೆಲ್ಲವೂ ಕೇವಲ ಕಾಕತಾಳೀಯ ಭೇಟಿಗಳೇ? ಮುಂದಿನ ಬೆಳವಣಿಗೆಗಳೇ ಇದಕ್ಕೆ ಉತ್ತರ ನೀಡಬೇಕಿದೆ.  

error: Content is protected !!
Scroll to Top