Sri Vidhushekhara Bharati Mahaswamiji | ಹಿಂದೆ ಮಾಡಿದ ಪಾಪಕರ್ಮಗಳನ್ನು ಧರ್ಮಾನುಷ್ಠಾನದಿಂದ ಕಳೆಯಬಹುದು | Kannadigra Vani


ಹಿಂದೆ ಮಾಡಿದ ಪಾಪಕರ್ಮಗಳನ್ನು ಧರ್ಮಾನುಷ್ಠಾನದಿಂದ ಕಳೆಯಬಹುದು: ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ

ಹಿಂದೆ ಮಾಡಿದ ಪಾಪಕರ್ಮಗಳು ನಮ್ಮ ಶ್ರೇಯಸ್ಸಿಗೆ ಪ್ರತಿಬಂಧಕವಾಗಿದ್ದರೂ, ಧರ್ಮಾನುಷ್ಠಾನ, ಭಗವದಾರಾಧನೆ ಹಾಗೂ ಸತ್ಕರ್ಮಗಳನ್ನು ಹೆಚ್ಚಾಗಿ ಮಾಡುವ ಮೂಲಕ ಅವುಗಳನ್ನು ದಾಟಿ ಉತ್ತಮ ಶ್ರೇಯಸ್ಸನ್ನು ಪಡೆಯಬಹುದು ಎಂದು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.

ಸಾಲ ತೀರಿಸುವ ಉದಾಹರಣೆ ನೀಡಿದ ಸ್ವಾಮೀಜಿ, “ಒಬ್ಬ ವ್ಯಕ್ತಿಗೆ 50 ರೂಪಾಯಿ ಸಾಲವಿದ್ದರೆ, ಅದನ್ನು ತೀರಿಸಲು ಕನಿಷ್ಠ 50 ರೂಪಾಯಿ ಸಂಪಾದಿಸಲೇಬೇಕು. ಅದಕ್ಕಿಂತ ಹೆಚ್ಚು ಸಂಪಾದಿಸಿದರೂ ಯಾವುದೇ ತಪ್ಪಿಲ್ಲ. ಅದೇ ರೀತಿ ಹಿಂದೆ ಮಾಡಿದ ಅಧರ್ಮ ಕಡಿಮೆ ಇದ್ದರೂ, ಈ ಜನ್ಮದಲ್ಲಿ ಧರ್ಮಾಚರಣೆಯನ್ನು ಹೆಚ್ಚಿಸುವುದರಲ್ಲಿ ಯಾವುದೇ ಆಪತ್ತಿಲ್ಲ. ಬದಲಾಗಿ ಅದರಿಂದ ಹೆಚ್ಚಿನ ಶ್ರೇಯಸ್ಸು ದೊರೆಯುತ್ತದೆ” ಎಂದು ಹೇಳಿದರು.

ಧರ್ಮಾನುಷ್ಠಾನ ಮತ್ತು ಭಗವಂತನ ಆರಾಧನೆಯನ್ನು ಹೆಚ್ಚಿಸುವುದರಿಂದ ಹಿಂದಿನ ಕರ್ಮಗಳಿಂದ ಉಂಟಾಗಿರುವ ಪ್ರತಿಬಂಧಕಗಳನ್ನು ದಾಟಲು ಸಾಧ್ಯವಾಗುತ್ತದೆ. ಜೊತೆಗೆ ಜೀವನದಲ್ಲಿ ವಿಶೇಷವಾದ ಶ್ರೇಯಸ್ಸನ್ನೂ ಪಡೆಯಬಹುದು ಎಂದು ಅವರು ವಿವರಿಸಿದರು.

ಜನರು ಭಗವಂತನ ಹಾಗೂ ಜಗನ್ಮಾತೆಯ ಅನುಗ್ರಹಕ್ಕೆ ಪಾತ್ರರಾಗಬೇಕು ಎಂಬ ಕಾರುಣ್ಯದಿಂದಲೇ ಜಗದ್ಗುರು ಶ್ರೀ ಆದಿಶಂಕರ ಭಗವತ್ಪಾದರು ಅದ್ಭುತವಾದ ಸ್ತೋತ್ರಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ‘ಸೌಂದರ್ಯ ಲಹರಿ’ ಸ್ತೋತ್ರವು ಅತ್ಯಂತ ವಿಶಿಷ್ಟವಾದದ್ದು ಎಂದು ಶ್ರೀಗಳು ತಿಳಿಸಿದರು.

ಸೌಂದರ್ಯ ಲಹರಿಯಲ್ಲಿ ಜಗನ್ಮಾತೆಯ ಮಹಿಮೆಯನ್ನು ಅತ್ಯಂತ ಅದ್ಭುತವಾಗಿ ಸ್ತುತಿಸಲಾಗಿದ್ದು, ಸಾಹಿತ್ಯ, ಅಲಂಕಾರ, ವ್ಯಾಕರಣ ಸೇರಿದಂತೆ ಹಲವು ವಿಶೇಷ ಅಂಶಗಳು ಇದರಲ್ಲಿವೆ ಎಂದು ಅವರು ಹೇಳಿದರು.

ಶ್ರೀ ಆದಿಶಂಕರ ಭಗವತ್ಪಾದರ ವಿಶಿಷ್ಟ ಕೀರ್ತಿ ಶತಮಾನಗಳು ಕಳೆದರೂ ಅಚಲವಾಗಿದೆ. ಅವರ ಶಿಷ್ಯ ಪರಂಪರೆಗೆ ಸೇರಿದವರಾಗಿರುವುದನ್ನು ಹೆಮ್ಮೆಯಿಂದ ಸ್ವೀಕರಿಸಿ, ಅವರು ತೋರಿದ ಮಾರ್ಗವನ್ನು ಅನುಸರಿಸುವ ಮೂಲಕ ಜೀವನವನ್ನು ಕೃತಾರ್ಥಗೊಳಿಸಬೇಕು ಎಂದು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಕರೆ ನೀಡಿದರು.


Advertisement

Recent Posts

error: Content is protected !!
Scroll to Top