Author name: kannadigaravani@gmail.com

Kolar Chikkaballapur News, Political News

ಜೆಡಿಎಸ್ ಚಿಕ್ಕಬಳ್ಳಾಪುರ ಜಿಲ್ಲಾ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾಧ್ಯಕ್ಷರಾಗಿ ಅಕಿಲ್ ರೆಡ್ಡಿ ಮರು ಆಯ್ಕೆ

ಚಿಕ್ಕಬಳ್ಳಾಪುರ: ಬೆಂಗಳೂರಿನ ಜೆಪಿ ಭವನದಲ್ಲಿ ಇಂದು ನಡೆದ ಕರ್ನಾಟಕ ಪ್ರದೇಶ ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ, ಚಿಕ್ಕಬಳ್ಳಾಪುರ ಜಿಲ್ಲಾ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾಧ್ಯಕ್ಷರಾಗಿ ಅಕಿಲ್ ರೆಡ್ಡಿ, ಜೀಡಮಾಕಲಹಳ್ಳಿ ಅವರನ್ನು ಮತ್ತೊಮ್ಮೆ ಮರು ಆಯ್ಕೆ ಮಾಡಲಾಗಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಮೇಲಿನ ಅಭಿಮಾನ, ನಾಯಕರ ಮೇಲಿನ ನಿಷ್ಠೆ ಹಾಗೂ ಸಂಘಟನೆಗಾಗಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಮತ್ತೊಮ್ಮೆ ಮಹತ್ತರ ಜವಾಬ್ದಾರಿ ನೀಡಿರುವುದಕ್ಕೆ ಅಕಿಲ್ ರೆಡ್ಡಿ ಅವರು ಪಕ್ಷದ ವರಿಷ್ಠರಾದ ಹೆಚ್.ಡಿ. ದೇವೇಗೌಡರು, ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ರಾಜ್ಯ ಯುವನಾಯಕ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಕೋರ್ ಕಮಿಟಿ ರಾಜ್ಯಾಧ್ಯಕ್ಷ ಜೆ.ಕೆ. ಕೃಷ್ಣಾರೆಡ್ಡಿ, ಮಹಿಳಾ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಮುನಿಯಪ್ಪ, ತಿಪ್ಪೇಸ್ವಾಮಿ, ರಮೇಶ್ ಗೌಡ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯಾಧ್ಯಕ್ಷ ಚಂದನ್ ಗೌಡ ಸೇರಿದಂತೆ ಪಕ್ಷದ ಹಿರಿಯ ನಾಯಕರು ಹಾಗೂ ಮುಖಂಡರಿಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. “ಪದವಿ ಸಿಕ್ಕಿರುವುದಕ್ಕೆ ಹೆಮ್ಮೆಪಡುವುದಕ್ಕಿಂತ, ಪಕ್ಷದ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ಸಿಕ್ಕಿರುವುದೇ ನನ್ನ ಹೆಮ್ಮೆ” ಎಂದು ಅಕಿಲ್ ರೆಡ್ಡಿ ತಿಳಿಸಿದ್ದಾರೆ.

Bangalore News / ಬೆಂಗಳೂರು ಸುದ್ದಿ, Karntaka Politics

Dr A Ramya Ramesh | ಡಾ. ಎ. ರಮ್ಯಾ ರಮೇಶ್‌ಗೆ ‘The Great Daughter of India’ ಗೌರವ | Kannadigara Vani

ಬೆಂಗಳೂರು: ಜೆಡಿಎಸ್ ಬೆಂಗಳೂರು ನಗರ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ಅವರ ಧರ್ಮಪತ್ನಿ, HMR Group of Institutionsನ CEO ಹಾಗೂ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಡಾ. ಎ. ರಮ್ಯಾ ರಮೇಶ್ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಶ್ರೇಷ್ಠ ಸೇವೆ, ಸಾಧನೆ ಹಾಗೂ ಸಮಾಜಕ್ಕೆ ನೀಡುತ್ತಿರುವ ಅಮೂಲ್ಯ ಕೊಡುಗೆಗಳನ್ನು ಗುರುತಿಸಿ ಪ್ರತಿಷ್ಠಿತ ‘The Great Daughter of India’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಈ ಪ್ರತಿಷ್ಠಿತ ಗೌರವವನ್ನು ಸ್ವೀಕರಿಸಿದ ಡಾ. ಎ. ರಮ್ಯಾ ರಮೇಶ್ ಅವರಿಗೆ ಕುಟುಂಬಸ್ಥರು ಹಾಗೂ HMR ಕುಟುಂಬದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ. ಅವರ ಪರಿಶ್ರಮ, ಸಮರ್ಪಣೆ ಹಾಗೂ ಸಾಧನೆಯ ಪಯಣ ಮತ್ತಷ್ಟು ಎತ್ತರಕ್ಕೆ ಸಾಗಲಿ, ಸಮಾಜಕ್ಕೆ ಇನ್ನಷ್ಟು ಪ್ರೇರಣೆಯಾಗಲಿ ಎಂದು ಶುಭ ಹಾರೈಸಲಾಗಿದೆ.

Special Stories

Iskcon Akshay Patra Foundation | ಅಕ್ಷಯ ಪಾತ್ರೆಯ ಅದ್ಭುತ ಸೇವೆ! Kannadigara Vani

ಅಕ್ಷಯ ಪಾತ್ರ ಫೌಂಡೇಶನ್ (The Akshaya Patra Foundation) ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಲಾಭರಹಿತ ಸಂಸ್ಥೆಯಾಗಿದ್ದು, ಶಾಲಾ ಮಕ್ಕಳ ಹಸಿವು ನೀಗಿಸುವುದರ ಜೊತೆಗೆ ಅವರ ಶಿಕ್ಷಣಕ್ಕೆ ಬೆಂಬಲ ನೀಡುವ ಮಹತ್ವದ ಕಾರ್ಯ ಮಾಡುತ್ತಿದೆ. ಹೇಗೆ ಆರಂಭವಾಯಿತು? 1997ರಲ್ಲಿ ಬೆಂಗಳೂರಿನಲ್ಲಿ ಕೆಲವೇ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡುವ ಮೂಲಕ ಅಕ್ಷಯ ಪಾತ್ರೆಯ ಸೇವೆ ಆರಂಭವಾಯಿತು. ಕೆಲವೇ ಮಕ್ಕಳಿಂದ ಆರಂಭವಾದ ಈ ಪ್ರಯತ್ನ ಇಂದು ಲಕ್ಷಾಂತರ ಮಕ್ಕಳಿಗೆ ಪ್ರತಿದಿನ ಪೌಷ್ಟಿಕ ಆಹಾರ ತಲುಪಿಸುವ ಬೃಹತ್ ಸೇವಾ ಸಂಸ್ಥೆಯಾಗಿ ಬೆಳೆದಿದೆ. ಇಂದಿನ ಅಕ್ಷಯ ಪಾತ್ರೆ 📌 ಪ್ರತಿದಿನ 23.50 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಬಿಸಿಬಿಸಿ ಮತ್ತು ಪೌಷ್ಟಿಕ ಆಹಾರ 📌 25,000 ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಆಹಾರ ವಿತರಣ 📌 78 ಅಡುಗೆಮನೆಗಳ ಮೂಲಕ ಆಹಾರ ತಯಾರಿಕೆ 📌 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೇವೆ 📌 ಆಧುನಿಕ ತಂತ್ರಜ್ಞಾನ ಮತ್ತು ಸ್ವಚ್ಛತಾ ಮಾನದಂಡಗಳನ್ನು ಬಳಸಿಕೊಂಡು ದೊಡ್ಡ ಪ್ರಮಾಣದಲ್ಲಿ ಆಹಾರ ತಯಾರಿಕೆ ಊಟ ಮಾತ್ರವಲ್ಲ… ಶಿಕ್ಷಣಕ್ಕೂ ಬೆಂಬಲ!ಹಸಿವಿನಿಂದ ಬಳಲುತ್ತಿರುವ ಮಕ್ಕಳು ತರಗತಿಯಲ್ಲಿ ಗಮನ ಕೇಂದ್ರೀಕರಿಸಲು ಕಷ್ಟಪಡಬಹುದು. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಮಕ್ಕಳಿಗೆ ಶಾಲೆಯಲ್ಲೇ ಪೌಷ್ಟಿಕ ಆಹಾರ ದೊರೆಯುವಂತೆ ಮಾಡುವ ಮೂಲಕ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕತೆಯ ಕ್ಷೇತ್ರದಲ್ಲಿ ಅಕ್ಷಯ ಪಾತ್ರೆ ಪ್ರಮುಖ ಪಾತ್ರ ವಹಿಸುತ್ತಿದೆ.ಮಕ್ಕಳು ಶಾಲೆಗೆ ನಿಯಮಿತವಾಗಿ ಹಾಜರಾಗಲು, ತರಗತಿಯಲ್ಲಿ ಉತ್ತಮವಾಗಿ ಕಲಿಯಲು ಮತ್ತು ಆರೋಗ್ಯಕರವಾಗಿ ಬೆಳೆಯಲು ಪೌಷ್ಟಿಕ ಆಹಾರ ನೆರವಾಗುತ್ತದೆ ಎಂಬ ಉದ್ದೇಶದೊಂದಿಗೆ ಸಂಸ್ಥೆ ತನ್ನ ಸೇವೆಯನ್ನು ವಿಸ್ತರಿಸುತ್ತಿದೆ. ಪೌಷ್ಟಿಕ ಆಹಾರಕ್ಕೆ ಆದ್ಯತೆಪ್ರದೇಶದ ಆಹಾರ ಪದ್ಧತಿ ಮತ್ತು ಸ್ಥಳೀಯ ರುಚಿಗೆ ಅನುಗುಣವಾಗಿ ಮೆನು ರೂಪಿಸಲಾಗುತ್ತದೆ. ಅನ್ನ, ಸಾಂಬಾರ್, ದಾಲ್, ತರಕಾರಿ, ಖಿಚಡಿ ಸೇರಿದಂತೆ ವಿವಿಧ ಪೌಷ್ಟಿಕ ಆಹಾರಗಳನ್ನು ಮಕ್ಕಳಿಗೆ ನೀಡಲಾಗುತ್ತದೆ.ಆಹಾರದ ಗುಣಮಟ್ಟ, ಸ್ವಚ್ಛತೆ ಮತ್ತು ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಅಡುಗೆಮನೆಯಿಂದ ಶಾಲೆಯವರೆಗೆ…ಬೃಹತ್ ಪ್ರಮಾಣದ ಆಹಾರವನ್ನು ನಿಗದಿತ ಸಮಯದಲ್ಲಿ ತಯಾರಿಸಿ, ಪ್ಯಾಕ್ ಮಾಡಿ, ವಿಶೇಷ ವಾಹನಗಳ ಮೂಲಕ ಶಾಲೆಗಳಿಗೆ ತಲುಪಿಸಲಾಗುತ್ತದೆ.ಅಂದರೆ, ಒಂದು ಮಗುವಿನ ತಟ್ಟೆಗೆ ಊಟ ತಲುಪುವ ಹಿಂದೆ ಅಡುಗೆ ಸಿಬ್ಬಂದಿ, ಪ್ಯಾಕಿಂಗ್ ತಂಡ, ಚಾಲಕರು, ನಿರ್ವಹಣಾ ಸಿಬ್ಬಂದಿ ಮತ್ತು ಸಾವಿರಾರು ಸೇವಾ ಮನೋಭಾವದ ವ್ಯಕ್ತಿಗಳ ಪರಿಶ್ರಮ ಅಡಗಿದೆ. ಒಂದು ಊಟದ ಹಿಂದೆ ಒಂದು ದೊಡ್ಡ ಕನಸು ಅಕ್ಷಯ ಪಾತ್ರೆಯ ಮೂಲ ಆಶಯ ಸರಳ:«“ಯಾವ ಮಗುವೂ ಹಸಿವಿನಿಂದ ಶಿಕ್ಷಣದಿಂದ ದೂರವಾಗಬಾರದು.”»ಒಂದು ತಟ್ಟೆಯ ಬಿಸಿಬಿಸಿ ಊಟವು ಕೇವಲ ಹಸಿವು ನೀಗಿಸುವುದಲ್ಲ; ಅದು ಮಗುವಿಗೆ ಶಾಲೆಯಲ್ಲಿ ಉಳಿಯಲು, ಕಲಿಯಲು ಮತ್ತು ಉತ್ತಮ ಭವಿಷ್ಯದ ಕನಸು ಕಾಣಲು ಸಹಾಯ ಮಾಡುವ ಒಂದು ಹೆಜ್ಜೆಯಾಗಿದೆ. ಅನ್ನದಾನ → ಪೌಷ್ಟಿಕತೆ → ಶಿಕ್ಷಣ → ಉತ್ತಮ ಭವಿಷ್ಯಅಕ್ಷಯ ಪಾತ್ರೆ — ಒಂದು ಊಟದ ಮೂಲಕ ಲಕ್ಷಾಂತರ ಮಕ್ಕಳ ಭವಿಷ್ಯವನ್ನು ರೂಪಿಸುವ ಮಹಾನ್ ಸೇವಾ ಪಯಣ. 🙏

Kolar Chikkaballapur News

ಮೂರನೇ ಶ್ರಾವಣ ಶನಿವಾರ: ನವಧಾನ್ಯ ಅಲಂಕಾರದಲ್ಲಿ ಕಂಗೊಳಿಸಿದ ಕುರುಟಹಳ್ಳಿ ವೀರಾಂಜನೇಯ

ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರುಟಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಪ್ರಸಿದ್ಧ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೂರನೇ ಶ್ರಾವಣ ಶನಿವಾರದ ಅಂಗವಾಗಿ ವಿಶೇಷ ಪೂಜೆ ಹಾಗೂ ನವಧಾನ್ಯ ಅಲಂಕಾರ ನೆರವೇರಿಸಲಾಯಿತು. ಅರ್ಚಕರಾದ ಶ್ರೀರಾಮಚಂದ್ರ ಸ್ವಾಮಿ ಅವರ ನೇತೃತ್ವದಲ್ಲಿ ಶ್ರೀ ವೀರಾಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ವಿವಿಧ ನವಧಾನ್ಯಗಳಿಂದ ಸುಂದರವಾಗಿ ಅಲಂಕಾರ ಮಾಡಲಾಯಿತು. ವಿಶೇಷ ಅಲಂಕಾರವು ಭಕ್ತರ ಗಮನ ಸೆಳೆಯಿತು.ಶ್ರಾವಣ ಶನಿವಾರದ ಪ್ರಯುಕ್ತ ದೇವಾಲಯಕ್ಕೆ ಆಗಮಿಸಿದ ಭಕ್ತರು ಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದರು. ಸರ್ವರಿಗೂ ಶ್ರೀ ಹನುಮಂತನ ಆಶೀರ್ವಾದ ಸದಾ ಇರಲಿ ಎಂದು ಭಕ್ತರು ಪ್ರಾರ್ಥಿಸಿದರು.

Karntaka Politics, Political News

B Nagendra | ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ; ಸುದ್ದಿಗೋಷ್ಠಿಯಲ್ಲಿ ಕಣ್ಣೀರು!

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಮತ್ತೆ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿದ್ದು, ಈ ವಿವಾದದ ನಡುವೆಯೇ ಸಚಿವ ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ನಾಗೇಂದ್ರ, ಮಾತನಾಡುವ ವೇಳೆ ಭಾವುಕರಾಗಿ ಕಣ್ಣೀರಿಟ್ಟರು. ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ ನಾಗೇಂದ್ರ, ತಾನು ಯಾವುದೇ ತಪ್ಪು ಮಾಡಿಲ್ಲ, ರಾಜಕೀಯವಾಗಿ ತನ್ನನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡದಂತೆ ಸೂಚಿಸಿದ್ದರೂ, ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ತಾನು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದರು. ಏನಿದು ವಾಲ್ಮೀಕಿ ನಿಗಮದ ಹಗರಣ?ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ಸೇರಿದ ಹಣದ ಅಕ್ರಮ ವರ್ಗಾವಣೆ ಪ್ರಕರಣವು 2024ರಲ್ಲಿ ಬೆಳಕಿಗೆ ಬಂದಿತ್ತು. ನಿಗಮದ ಅಧಿಕಾರಿ ಪಿ. ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಸಿಕ್ಕಿದ ಡೆತ್ ನೋಟ್‌ನಲ್ಲಿ ಹಣಕಾಸಿನ ಅಕ್ರಮಗಳ ಬಗ್ಗೆ ಆರೋಪಗಳು ಕೇಳಿಬಂದಿದ್ದವು. ತನಿಖಾ ಸಂಸ್ಥೆಗಳ ಪ್ರಕಾರ, ನಿಗಮದ ಖಾತೆಯಿಂದ ಸುಮಾರು ₹89.63 ಕೋಟಿ ಹಣವನ್ನು ನಕಲಿ ದಾಖಲೆಗಳು ಹಾಗೂ ಬ್ಯಾಂಕಿಂಗ್ ಸೂಚನೆಗಳ ಮೂಲಕ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬ ಆರೋಪವಿದೆ. ನಂತರ ಈ ಹಣವನ್ನು ಹಲವು ಖಾತೆಗಳ ಮೂಲಕ ವರ್ಗಾವಣೆ ಮಾಡಿ ನಗದು, ಚಿನ್ನಾಭರಣ ಸೇರಿದಂತೆ ವಿವಿಧ ರೂಪಗಳಲ್ಲಿ ಬಳಸಲಾಗಿದೆ ಎಂದು ತನಿಖಾ ಸಂಸ್ಥೆಗಳು ಹೇಳಿವೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವೂ ತನಿಖೆ ನಡೆಸಿದ್ದು, 2024ರಲ್ಲಿ ಸಲ್ಲಿಸಿದ ತನ್ನ ಪ್ರಾಸಿಕ್ಯೂಷನ್ ದೂರಿನಲ್ಲಿ ಬಿ. ನಾಗೇಂದ್ರ ಅವರ ಹೆಸರನ್ನು ಪ್ರಮುಖ ಆರೋಪಿಯಾಗಿ ಉಲ್ಲೇಖಿಸಿತ್ತು. ಆದರೆ, ಇವು ತನಿಖಾ ಸಂಸ್ಥೆಗಳ ಆರೋಪಗಳಾಗಿದ್ದು, ನ್ಯಾಯಾಲಯದಲ್ಲಿ ಅಂತಿಮವಾಗಿ ಸಾಬೀತಾಗಬೇಕಿದೆ. ರೆಡ್ಡಿ–ಶ್ರೀರಾಮುಲುಗೆ ನಾಗೇಂದ್ರ ಸವಾಲ್ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿದ್ದ ನಾಗೇಂದ್ರ, ತಮ್ಮ ವಿರುದ್ಧ ರಾಜಕೀಯವಾಗಿ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಹೇಳುತ್ತಾ, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದರು. ತಮ್ಮ ವಿರುದ್ಧ ಮಾಡಲಾಗುತ್ತಿರುವ ಆರೋಪಗಳಿಗೆ ದಾಖಲೆಗಳೊಂದಿಗೆ ಉತ್ತರ ನೀಡುವುದಾಗಿ ಸವಾಲು ಹಾಕಿದರು. ವಾಲ್ಮೀಕಿ ಹಗರಣದ ಆರೋಪದ ನಡುವೆ ಮತ್ತೊಮ್ಮೆ ರಾಜೀನಾಮೆ ನೀಡಿದ ನಾಗೇಂದ್ರ; ಕಣ್ಣೀರಿನ ನಡುವೆ ರಾಜಕೀಯ ಎದುರಾಳಿಗಳಿಗೆ ನೇರ ಸವಾಲ್ — ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾದ ಬೆಳವಣಿಗೆ!

Karntaka Politics, Political News, Popular News

Siddaramaiah | ಕಾಂಗ್ರೆಸ್‌ನಲ್ಲಿ ‘ಗೇಮ್’ ಶುರು? Kannadigara Vani

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಇತ್ತೀಚಿನ ಬೆಳವಣಿಗೆಗಳು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರಿಸಿದ ಬಳಿಕ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್‌ನ ಹಲವು ನಾಯಕರೊಂದಿಗೆ ಸಿದ್ದರಾಮಯ್ಯ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕೆಲ ನಾಯಕರ ಭೇಟಿಗೂ ನಿರಾಕರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರಿಂದ ಸಿದ್ದರಾಮಯ್ಯ ಮುಂದಿನ ರಾಜಕೀಯ ನಡೆ ಏನು ಎಂಬ ಪ್ರಶ್ನೆ ಮೂಡಿದೆ. ಇದರ ನಡುವೆ ಇತ್ತೀಚೆಗೆ ಖಾಸಗಿ ಹೋಟೆಲ್‌ನಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಿದ್ದರಾಮಯ್ಯ ಭೇಟಿಯಾಗಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿತ್ತು. ಆದರೆ ಈ ಭೇಟಿಗೆ ಸಂಬಂಧಿಸಿದ ಯಾವುದೇ ಅಧಿಕೃತ ಫೋಟೋಗಳು ಹೊರಬಂದಿರಲಿಲ್ಲ. ಆದರೆ ಇದೀಗ ಸರಣಿ ರಾಜಕೀಯ ಭೇಟಿಗಳು ಕುತೂಹಲಕ್ಕೆ ಕಾರಣವಾಗಿವೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಸಿದ್ದರಾಮಯ್ಯ ಭೇಟಿಯಾಗಿರುವುದು ಗಮನ ಸೆಳೆದಿದೆ. ಭೇಟಿ ಆಕಸ್ಮಿಕವಾಗಿದ್ದರೂ, ಇಬ್ಬರು ಹಿರಿಯ ನಾಯಕರ ಭೇಟಿಗೆ ರಾಜಕೀಯ ಮಹತ್ವ ಕಲ್ಪಿಸಲಾಗುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕ ಸಿ.ಟಿ. ರವಿ ಅವರು ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ‘ಕಾವೇರಿ’ಗೆ ತೆರಳಿ ಮಾತುಕತೆ ನಡೆಸಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಉಭಯ ಪಕ್ಷಗಳ ನಾಯಕರು ಭೇಟಿಯಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆದಿರಬಹುದು ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಇದೇ ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಿದ್ದರಾಮಯ್ಯ ಭೇಟಿಯಾಗಿರುವುದು ಕೂಡ ಗಮನ ಸೆಳೆದಿದೆ. ಇಬ್ಬರೂ ಉಭಯ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಈ ಭೇಟಿಯ ಹಿಂದಿನ ರಾಜಕೀಯ ಲೆಕ್ಕಾಚಾರವೇನು ಎಂಬ ಪ್ರಶ್ನೆ ಮೂಡಿದೆ. “ರಾಜಕಾರಣದಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಶಾಶ್ವತ ಮಿತ್ರರೂ ಇಲ್ಲ” ಎಂಬ ಮಾತಿನಂತೆ, ಸಿದ್ದರಾಮಯ್ಯ ಅವರ ಇತ್ತೀಚಿನ ರಾಜಕೀಯ ಸಂಪರ್ಕಗಳು ಹೊಸ ಸಮೀಕರಣದ ಮುನ್ಸೂಚನೆಯೇ ಎಂಬ ಚರ್ಚೆ ಜೋರಾಗಿದೆ. ಸಿದ್ದರಾಮಯ್ಯ ಯಾವುದಾದರೂ ರಾಜಕೀಯ ದಾಳ ಉರುಳಿಸಲು ಸಿದ್ಧತೆ ನಡೆಸುತ್ತಿದ್ದಾರಾ? ಅಥವಾ ಇವೆಲ್ಲವೂ ಕೇವಲ ಕಾಕತಾಳೀಯ ಭೇಟಿಗಳೇ? ಮುಂದಿನ ಬೆಳವಣಿಗೆಗಳೇ ಇದಕ್ಕೆ ಉತ್ತರ ನೀಡಬೇಕಿದೆ.  

Political News, Popular News

MB Patil : ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಕೇಂದ್ರದ ನಿರ್ಲಕ್ಷ್ಯ ಖಂಡನೀಯ: ಎಂ.ಬಿ. ಪಾಟೀಲ್

ಬೆಂಗಳೂರು: ದೇಶದ 7 ಪ್ರಮುಖ ರೈಲ್ವೆ ಮಾರ್ಗಗಳನ್ನು ಚತುಷ್ಪಥಗೊಳಿಸುವ ಕೇಂದ್ರದ ಯೋಜನೆಯಲ್ಲಿ ಕರ್ನಾಟಕದ ಯಾವುದೇ ಮಾರ್ಗ ಸೇರಿಸದಿರುವುದಕ್ಕೆ ಸಚಿವ ಎಂ.ಬಿ. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಪ್ರಮುಖ ರೈಲ್ವೆ ಮಾರ್ಗಗಳಾದ ಬೆಂಗಳೂರು–ವಿಜಯಪುರ, ಬೆಂಗಳೂರು–ಹುಬ್ಬಳ್ಳಿ, ಬೆಂಗಳೂರು–ಮಂಗಳೂರು, ಬೆಂಗಳೂರು–ಚೆನ್ನೈ ಸೇರಿದಂತೆ ಪ್ರಮುಖ ಮಾರ್ಗಗಳನ್ನು ಹಂತ ಹಂತವಾಗಿ ಚತುಷ್ಪಥಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ತುಮಕೂರು–ದಾವಣಗೆರೆ ರೈಲು ಮಾರ್ಗ ದ್ವಿಪಥಗೊಳಿಸುವುದು ಹಾಗೂ ರಾಜ್ಯದ ಹೈಸ್ಪೀಡ್ ರೈಲು ಯೋಜನೆಗಳಿಗೆ ಆದ್ಯತೆ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. “ಕರ್ನಾಟಕ ವಿಶೇಷ ಸವಲತ್ತು ಕೇಳುತ್ತಿಲ್ಲ; ನಮಗೆ ಸಲ್ಲಬೇಕಾದ ನ್ಯಾಯಯುತ ಪಾಲನ್ನು ಮಾತ್ರ ಕೇಳುತ್ತಿದ್ದೇವೆ. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ,” ಎಂದು ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದರು. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೇಂದ್ರಕ್ಕೆ ಪತ್ರ ಬರೆಯುವುದರ ಜೊತೆಗೆ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಸಹಾಯಕ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ಕರ್ನಾಟಕದ ರೈಲ್ವೆ ಹಕ್ಕುಗಳ ಕುರಿತು ಒಕ್ಕೊರಲಿನಿಂದ ಧ್ವನಿ ಎತ್ತುವುದಾಗಿ ತಿಳಿಸಿದರು.

Political News, Popular News

Nikhil Kumaraswamy | 3 ಬಾರಿ ಸೋಲು, ಕುಟುಂಬ ರಾಜಕಾರಣದ ಆರೋಪ: ನಿಖಿಲ್ ಕುಮಾರಸ್ವಾಮಿ ಖಡಕ್ ಉತ್ತರ!

ರಾಮನಗರ: ಮೂರು ಬಾರಿ ಚುನಾವಣೆಯಲ್ಲಿ ಸೋತರೂ ರಾಜಕೀಯದಿಂದ ಹಿಂದೆ ಸರಿಯದ ನಿಖಿಲ್ ಕುಮಾರಸ್ವಾಮಿ, “ನಾನು ಸೋತಿರಬಹುದು, ಆದರೆ ಓಡಿ ಹೋಗುವ ವ್ಯಕ್ತಿಯಲ್ಲ. ಎಲ್ಲಿ ಸೋತಿದ್ದೀನೋ ಅಲ್ಲೇ ಮತ್ತೆ ಸ್ಪರ್ಧಿಸುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ. 2028ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದಲೇ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಬಿಡದಿ ಭೂಮಿ ವಿಚಾರದಲ್ಲೂ ಸರ್ಕಾರಕ್ಕೆ ತಿರುಗೇಟು ನೀಡಿದ ನಿಖಿಲ್, ಅಭಿವೃದ್ಧಿಗೆ ಜೆಡಿಎಸ್‌ ವಿರೋಧಿಯಲ್ಲ. ಸರ್ಕಾರ ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಸುಮಾರು ಒಂದೂವರೆ ಲಕ್ಷ ಎಕರೆ ಭೂಮಿಯನ್ನು ಬಳಸಿಕೊಂಡು ಅಲ್ಲೇ AI ಸಿಟಿ ನಿರ್ಮಿಸಲಿ. “ಬಿಡದಿಯ ಭೂಮಿಯೇ ಯಾಕೆ ಬೇಕು?” ಎಂದು ಪ್ರಶ್ನಿಸಿದ್ದಾರೆ. ಇನ್ನು ಕುಟುಂಬ ರಾಜಕಾರಣದ ಆರೋಪಕ್ಕೆ ಪ್ರತಿಕ್ರಿಯಿಸಿದ ನಿಖಿಲ್, ದೇಶದ ಬಹುತೇಕ ಪ್ರಾದೇಶಿಕ ಪಕ್ಷಗಳು ಕುಟುಂಬದೊಂದಿಗೆ ಬೆಸೆದುಕೊಂಡಿವೆ. ಕಾಂಗ್ರೆಸ್‌ನಲ್ಲೂ ಕುಟುಂಬ ರಾಜಕಾರಣದ ಚರ್ಚೆ ಇದೆ ಎಂದು ತಿರುಗೇಟು ನೀಡಿದ್ದಾರೆ. ನಾಗೇಂದ್ರ ರಾಜೀನಾಮೆ ವಿಚಾರದಲ್ಲೂ ವಿಪಕ್ಷಗಳ ಹೋರಾಟವನ್ನು ಸಮರ್ಥಿಸಿಕೊಂಡ ನಿಖಿಲ್, ನಾಗೇಂದ್ರ ತಪ್ಪು ಮಾಡಿರುವುದನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದರು. ಆರೋಪ ಎದುರಿಸುತ್ತಿದ್ದ ವ್ಯಕ್ತಿಯನ್ನು ಮತ್ತೆ ಸಚಿವರನ್ನಾಗಿ ಮಾಡಿದ್ದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದ ನಿಖಿಲ್, “CEO ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ರಿಯಲ್ ಎಸ್ಟೇಟ್ ವ್ಯವಹಾರದ ರೀತಿಯಲ್ಲಿ ಸರ್ಕಾರ ನಡೆಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ಮೂರು ಸೋಲುಗಳ ಬಳಿಕವೂ ಆತ್ಮವಿಶ್ವಾಸ ಕಳೆದುಕೊಳ್ಳದೆ, ಪ್ರಶ್ನೆಗಳಿಗೆ ನೇರ ಹಾಗೂ ಸ್ಪಷ್ಟ ಉತ್ತರ ನೀಡಿರುವ ನಿಖಿಲ್ ಅವರ ರಾಜಕೀಯ ಪಕ್ವತೆ ಇದೀಗ ಚರ್ಚೆಗೆ ಗ್ರಾಸವಾಗಿದೆ.

Political News, Popular News

Nice Road Bangalore| ನೈಸ್ ಯೋಜನೆಯನ್ನು ಸರ್ಕಾರ ವಶಪಡಿಸಿಕೊಳ್ಳಲು ಜೆಡಿಎಸ್‌ ಆಗ್ರಹ

ಬೆಂಗಳೂರು: ನೈಸ್ (NICE/BMICP) ಯೋಜನೆಯಲ್ಲಿ ನಡೆದಿರುವ ಬೃಹತ್ ಅಕ್ರಮಗಳು ಹಾಗೂ FWA ಮತ್ತು PTA ಒಪ್ಪಂದಗಳ ಸ್ಪಷ್ಟ ಉಲ್ಲಂಘನೆಯನ್ನು ಖಂಡಿಸಿ, ನೈಸ್ ಯೋಜನೆಯನ್ನು ರಾಜ್ಯ ಸರ್ಕಾರ ಕೂಡಲೇ ವಶಪಡಿಸಿಕೊಳ್ಳಬೇಕು ಎಂದು ಜೆಡಿಎಸ್‌ ಆಗ್ರಹಿಸಿದೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಸುರೇಶ್ ಬಾಬು ಸಿ. ಬಿ. ಅವರ ನೇತೃತ್ವದಲ್ಲಿ ಜನತಾದಳ (ಜಾತ್ಯತೀತ) ಪಕ್ಷದ ನಿಯೋಗವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ನೈಸ್ ಯೋಜನೆಯಿಂದ ರೈತರಿಗೆ ಆಗಿರುವ ಅನ್ಯಾಯಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು ಹಾಗೂ ಒಪ್ಪಂದಗಳ ಉಲ್ಲಂಘನೆ ಮತ್ತು ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಒತ್ತಾಯಿಸಿತು.

Uncategorized

Congress MLA Prakash Kolivad | ರಾಜಕೀಯ ಭಿನ್ನಾಭಿಪ್ರಾಯದ ನಡುವೆಯೂ ಸೌಹಾರ್ದ: ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್‌ಗೆ ಶಾಸಕ ಪ್ರಕಾಶ್ ಕೋಳಿವಾಡ್ ಹುಟ್ಟುಹಬ್ಬದ ಶುಭಾಶಯ

ರಾಣೇಬೆನ್ನೂರು: ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಾಮಾನ್ಯವಾಗಿರುವ ಇಂದಿನ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಪ್ರಕಾಶ್ ಕೋಳಿವಾಡ್ ಅವರು ಬಿಜೆಪಿಯ ಮಾಜಿ ಶಾಸಕ ಹಾಗೂ ಆತ್ಮೀಯರಾದ ಶ್ರೀ ಅರುಣ್ ಕುಮಾರ್ ಪೂಜಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿರುವುದು ಗಮನ ಸೆಳೆದಿದೆ. “ಮಾಜಿ ಶಾಸಕರು, ಆತ್ಮೀಯರಾದ ಶ್ರೀ ಅರುಣ್ ಕುಮಾರ್ ಪೂಜಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ಇನ್ನೂ ಹೆಚ್ಚಿನ ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಪ್ರಕಾಶ್ ಕೋಳಿವಾಡ್ ಅವರು ಫೇಸ್‌ಬುಕ್ ಮೂಲಕ ಶುಭಾಶಯ ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್ ಅವರು ಕೂಡ ಪ್ರಕಾಶ್ ಕೋಳಿವಾಡ್ ಅವರಿಗೆ ಅಭಿನಂದನೆ ಹಾಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಸಾಮಾನ್ಯವಾಗಿ ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು, ಭಿನ್ನಾಭಿಪ್ರಾಯಗಳು ಕಂಡುಬರುವ ಸಂದರ್ಭದಲ್ಲಿ ಎರಡು ಪ್ರಮುಖ ರಾಜಕೀಯ ಪಕ್ಷಗಳ ನಾಯಕರ ನಡುವಿನ ಈ ಸೌಹಾರ್ದಯುತ ನಡೆ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಗಮನ ಸೆಳೆದಿದೆ. ಉಭಯ ಪಕ್ಷಗಳ ಕಾರ್ಯಕರ್ತರಿಂದಲೂ ಈ ಬೆಳವಣಿಗೆಗೆ ಹರ್ಷ ವ್ಯಕ್ತವಾಗಿದೆ.

error: Content is protected !!
Scroll to Top