B Y Vijayendra | ರೈತರ ಹಕ್ಕಿಗಾಗಿ ‘ಬಳ್ಳಾರಿ ಚಲೋ’: 190ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ವಿಜಯೇಂದ್ರ ಆಗ್ರಹ | Kannadigara Vani

ಮಸ್ಕಿ: ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಮುಂದುವರಿದಿದೆ. ಮಸ್ಕಿಯ ಗುಡದೂರಿನಿಂದ ಆರಂಭಗೊಂಡ ಪಾದಯಾತ್ರೆಯ ಮೂರನೇ ದಿನದ ನಡಿಗೆಯಲ್ಲಿ ದಾರಿಯುದ್ದಕ್ಕೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಪಾದಯಾತ್ರೆಯ ಸಂದರ್ಭದಲ್ಲಿ ತಾಲೂಕಿನ ಪಾಂಡುರಂಗ ಕ್ಯಾಂಪ್‌ಗೆ ಭೇಟಿ ನೀಡಿದ ವಿಜಯೇಂದ್ರ, ಗದ್ದೆಯಲ್ಲಿ ಭತ್ತದ ಸಸಿ ನೆಡುತ್ತಿದ್ದ ರೈತರು ಹಾಗೂ ಮಹಿಳಾ ಕೃಷಿ ಕಾರ್ಮಿಕರೊಂದಿಗೆ ಕೆಲಕಾಲ ಕಳೆದರು. ರೈತರೊಂದಿಗೆ ಜಮೀನಿಗಿಳಿದು ಸಾಂಕೇತಿಕವಾಗಿ ಭತ್ತದ ಸಸಿ ನೆಡುವ ಕಾರ್ಯದಲ್ಲೂ ಅವರು ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಬರ, ರಾಜ್ಯ ಸರ್ಕಾರದ ನಿರ್ಲಕ್ಷ್ಯ ಸೇರಿದಂತೆ ಹಲವು ಸವಾಲುಗಳ ನಡುವೆಯೂ ರೈತರು ಕೃಷಿಯನ್ನೇ ನಂಬಿ ದುಡಿಯುತ್ತಿದ್ದಾರೆ. ಅನ್ನದಾತರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವವರೆಗೂ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಪಾದಯಾತ್ರೆಗೆ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಯುವಜನರಿಂದ ವ್ಯಕ್ತವಾಗುತ್ತಿರುವ ಬೆಂಬಲವು ಹೋರಾಟಕ್ಕೆ ಮತ್ತಷ್ಟು ಬಲ ನೀಡಿದೆ ಎಂದು ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣ ಪರಿಹಾರ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿರುವ ವಿಜಯೇಂದ್ರ, 190ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು ಹಾಗೂ ₹5 ಲಕ್ಷದವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ರೈತರು ಮತ್ತು ಶ್ರಮಿಕರ ಹಕ್ಕುಗಳಿಗಾಗಿ ನಡೆಯುತ್ತಿರುವ ಈ ಜನಾಂದೋಲನದ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ವಿಜಯೇಂದ್ರ ಹೇಳಿದ್ದಾರೆ.

error: Content is protected !!