25 Years of PM Modi | ಪ್ರಧಾನಿ ನರೇಂದ್ರ ಮೋದಿ ಜನ್ಮದಿನ: ಸೆ. 17ರಂದು ‘ಆಶೀರ್ವಾದದ ದೀಪ’ ಬೆಳಗಿಸಲು ಬಿಜೆಪಿ ಕರ್ನಾಟಕ ರಾಜ್ಯದ ಕರೆ

ಪ್ರಧಾನಿ ನರೇಂದ್ರ ಮೋದಿ ಜನ್ಮದಿನ: ಸೆ. 17ರಂದು ‘ಆಶೀರ್ವಾದದ ದೀಪ’ ಬೆಳಗಿಸಲು ಬಿಜೆಪಿ ಕರ್ನಾಟಕ ರಾಜ್ಯದ ಕರೆ ಬೆಂಗಳೂರು: ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸೆಪ್ಟೆಂಬರ್‌ 17ರಂದು ‘ಸೇವಾ ಸಂಕಲ್ಪ ಅಭಿಯಾನ’ದಡಿ ರಾಜ್ಯದ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ‘ಆಶೀರ್ವಾದದ ದೀಪ’ ಬೆಳಗಿಸುವಂತೆ ಬಿಜೆಪಿ ಕರ್ನಾಟಕ ರಾಜ್ಯ ಮನವಿ ಮಾಡಿದೆ. ದೇಶದ ಪ್ರಗತಿ ಮತ್ತು ಜನಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಲ್ಲಿಸಿರುವ ಸೇವೆಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರಿಗೆ ಭಗವಂತನು ದೀರ್ಘಾಯುಷ್ಯ, ಉತ್ತಮ ಆರೋಗ್ಯ ಹಾಗೂ ದೇಶ ಸೇವೆಗೆ ಇನ್ನಷ್ಟು ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುವಂತೆ ಪಕ್ಷ ತಿಳಿಸಿದೆ. ಸೆಪ್ಟೆಂಬರ್‌ 17ರಂದು ಸಂಜೆ ಮನೆಗಳಲ್ಲಿ ‘ಆಶೀರ್ವಾದದ ದೀಪ’ ಬೆಳಗಿಸುವ ಮೂಲಕ ಸೇವಾ ಸಂಕಲ್ಪ ಅಭಿಯಾನದಲ್ಲಿ ಭಾಗವಹಿಸಿ, ಪ್ರಧಾನಮಂತ್ರಿಯವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಬಿಜೆಪಿ ಕರ್ನಾಟಕ ರಾಜ್ಯ ಕರೆ ನೀಡಿದೆ.

DK Shivakumar | “ಮಗ ವಕೀಲನಾಗಬೇಕು ಎಂದಿದ್ದೆ” ಎಂದ ಡಿಕೆಶಿ; ಸಭೆಯಲ್ಲಿ ನಗೆಗಡಲು!

ಬೆಂಗಳೂರು: ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಮಗನ ಕುರಿತು ಹೇಳಿದ ಮಾತುಗಳು ಸಭೆಯಲ್ಲಿ ನಗೆ ಮೂಡಿಸಿದವು.“ನನಗೆ ಮೂರು ಜನ ಮಕ್ಕಳು. ನನ್ನನ್ನು ರಕ್ಷಣೆ ಮಾಡಲಾದರೂ ನೀನು ವಕೀಲನಾಗಬೇಕು ಎಂದು ಮಗನಿಗೆ ಹೇಳಿದ್ದೆ. ಇತ್ತೀಚಿಗಷ್ಟೇ ಕಾನೂನು ಪದವಿ ವ್ಯಾಸಂಗ ಮುಗಿಸಿದ್ದಾನೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.ಇದೇ ವೇಳೆ ನ್ಯಾಯಾಂಗದ ಘನತೆ ಕಾಪಾಡುವಂತೆ ನ್ಯಾಯಾಧೀಶರಿಗೆ ಕರೆ ನೀಡಿದ ಅವರು, “ನ್ಯಾಯದ ಕುರ್ಚಿಯಿಂದ ಅನ್ಯಾಯ ಹರಿಯಬಾರದು. ಅದಕ್ಕೆ ನೀವು ಆಸ್ಪದ ಕೊಡುವುದಿಲ್ಲ ಎಂಬ ನಂಬಿಕೆ ನನಗಿದೆ” ಎಂದರು.ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವ ಮುನ್ನವೇ ಮಾಧ್ಯಮಗಳಲ್ಲಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಮಾಧ್ಯಮಗಳ ವಿಚಾರಣೆಯ ಪ್ರಭಾವಕ್ಕೆ ನ್ಯಾಯಾಂಗ ವ್ಯವಸ್ಥೆ ಒಳಗಾಗಬಾರದು ಎಂದು ಮನವಿ ಮಾಡಿದರು.ಕರ್ನಾಟಕದ ನ್ಯಾಯಾಂಗ ವ್ಯವಸ್ಥೆ ದೇಶದಲ್ಲೇ ಪ್ರಬಲ ಹಾಗೂ ಖ್ಯಾತಿ ಪಡೆದಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್, ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‌ಗೆ ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಕಲಿಯಲು ಬರುತ್ತಾರೆ ಎಂದು ಹೇಳಿದರು. ಈ ಮಾತಿಗೆ ಸಭೆಯಲ್ಲಿ ಭಾರಿ ಕರತಾಡನ ಕೇಳಿಬಂತು.

Tejasvi Surya | ಟನಲ್‌ ರಸ್ತೆ ಈಗ ‘ಮಹಿಳಾ ಸಬಲೀಕರಣ’ ಯೋಜನೆಯೇ?; ಡಿ.ಕೆ. ಶಿವಕುಮಾರ್‌ಗೆ ತೇಜಸ್ವಿ ಸೂರ್ಯ ಪ್ರಶ್ನೆ! Kannadigara Vani

ಬೆಂಗಳೂರು: ಟನಲ್‌ ರಸ್ತೆ ಯೋಜನೆ ಇದೀಗ ‘ಮಹಿಳಾ ಸಬಲೀಕರಣ’ ಯೋಜನೆಯಾಗಿ ಬದಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ. ಟನಲ್‌ ರಸ್ತೆ ಯೋಜನೆಗೆ ಮಹಿಳಾ ಉದ್ಯಮಿಗಳು ಬೆಂಬಲ ನೀಡಬೇಕು ಎಂದು ಮುಖ್ಯಮಂತ್ರಿ ಹೇಳಿರುವುದನ್ನು ಉಲ್ಲೇಖಿಸಿರುವ ತೇಜಸ್ವಿ ಸೂರ್ಯ, ‘ಮಹಿಳಾ ಸಬಲೀಕರಣದ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ, ಮೊದಲು ತಮ್ಮದೇ ಸಚಿವ ಸಂಪುಟದಲ್ಲಿ ಕನಿಷ್ಠ ಒಬ್ಬ ಮಹಿಳೆಗೆ ಸ್ಥಾನ ನೀಡಬಹುದಲ್ಲವೇ?’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಪ್ರತಿ ವಾರವೂ ಈ ಯೋಜನೆಯನ್ನು ಸಮರ್ಥಿಸಲು ಹೊಸಹೊಸ ಕಾರಣಗಳನ್ನು ನೀಡಲಾಗುತ್ತಿದೆ. ಆರಂಭದಲ್ಲಿ ಬೆಂಗಳೂರಿಗೆ ಹೆಚ್ಚು ರಸ್ತೆಗಳು ಹಾಗೂ ಕಾರುಗಳ ಅಗತ್ಯವಿದೆ, ಇಲ್ಲದಿದ್ದರೆ ಪುರುಷರಿಗೆ ಮದುವೆಗೆ ಹುಡುಗಿಯರು ಸಿಗುವುದಿಲ್ಲ ಎಂಬ ರೀತಿಯಲ್ಲಿ ಯೋಜನೆಯನ್ನು ಸಮರ್ಥಿಸಲಾಗಿತ್ತು. ಇದೀಗ ಅದಕ್ಕೆ ‘ಮಹಿಳಾ ಸಬಲೀಕರಣ’ದ ಹೆಸರನ್ನು ನೀಡಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ. ‘ಮುಂದೆ ರಾಷ್ಟ್ರೀಯ ಭದ್ರತೆಯ ಹೆಸರನ್ನೂ ನೀಡಬಹುದೇ? ರಾಜ್ಯದ ರಹಸ್ಯ ದಾಖಲೆಗಳನ್ನು ಭೂಗತವಾಗಿ ಸಾಗಿಸಲು ಟನಲ್‌ ನಿರ್ಮಿಸುತ್ತಿದ್ದೇವೆ ಎಂದು ಹೇಳಬಹುದೇ?’ ಎಂದು ತೇಜಸ್ವಿ ಸೂರ್ಯ ವ್ಯಂಗ್ಯವಾಡಿದ್ದಾರೆ. ಕೆಟ್ಟ ಯೋಜನೆಯನ್ನು ಸಮರ್ಥಿಸಲು ಹೊಸಹೊಸ ಕಾರಣಗಳನ್ನು ಹುಡುಕುವ ಆತುರವೇ ಇದೀಗ ಯೋಜನೆಗಿಂತ ಹೆಚ್ಚು ಮನರಂಜನೀಯವಾಗಿದೆ ಎಂದು ಅವರು ಟೀಕಿಸಿದ್ದಾರೆ.

B Y Vijayendra | ರೈತರ ಹಕ್ಕಿಗಾಗಿ ‘ಬಳ್ಳಾರಿ ಚಲೋ’: 190ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ವಿಜಯೇಂದ್ರ ಆಗ್ರಹ | Kannadigara Vani

ಮಸ್ಕಿ: ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಮುಂದುವರಿದಿದೆ. ಮಸ್ಕಿಯ ಗುಡದೂರಿನಿಂದ ಆರಂಭಗೊಂಡ ಪಾದಯಾತ್ರೆಯ ಮೂರನೇ ದಿನದ ನಡಿಗೆಯಲ್ಲಿ ದಾರಿಯುದ್ದಕ್ಕೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಪಾದಯಾತ್ರೆಯ ಸಂದರ್ಭದಲ್ಲಿ ತಾಲೂಕಿನ ಪಾಂಡುರಂಗ ಕ್ಯಾಂಪ್‌ಗೆ ಭೇಟಿ ನೀಡಿದ ವಿಜಯೇಂದ್ರ, ಗದ್ದೆಯಲ್ಲಿ ಭತ್ತದ ಸಸಿ ನೆಡುತ್ತಿದ್ದ ರೈತರು ಹಾಗೂ ಮಹಿಳಾ ಕೃಷಿ ಕಾರ್ಮಿಕರೊಂದಿಗೆ ಕೆಲಕಾಲ ಕಳೆದರು. ರೈತರೊಂದಿಗೆ ಜಮೀನಿಗಿಳಿದು ಸಾಂಕೇತಿಕವಾಗಿ ಭತ್ತದ ಸಸಿ ನೆಡುವ ಕಾರ್ಯದಲ್ಲೂ ಅವರು ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಬರ, ರಾಜ್ಯ ಸರ್ಕಾರದ ನಿರ್ಲಕ್ಷ್ಯ ಸೇರಿದಂತೆ ಹಲವು ಸವಾಲುಗಳ ನಡುವೆಯೂ ರೈತರು ಕೃಷಿಯನ್ನೇ ನಂಬಿ ದುಡಿಯುತ್ತಿದ್ದಾರೆ. ಅನ್ನದಾತರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವವರೆಗೂ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಪಾದಯಾತ್ರೆಗೆ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಯುವಜನರಿಂದ ವ್ಯಕ್ತವಾಗುತ್ತಿರುವ ಬೆಂಬಲವು ಹೋರಾಟಕ್ಕೆ ಮತ್ತಷ್ಟು ಬಲ ನೀಡಿದೆ ಎಂದು ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣ ಪರಿಹಾರ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿರುವ ವಿಜಯೇಂದ್ರ, 190ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು ಹಾಗೂ ₹5 ಲಕ್ಷದವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ರೈತರು ಮತ್ತು ಶ್ರಮಿಕರ ಹಕ್ಕುಗಳಿಗಾಗಿ ನಡೆಯುತ್ತಿರುವ ಈ ಜನಾಂದೋಲನದ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ವಿಜಯೇಂದ್ರ ಹೇಳಿದ್ದಾರೆ.

Pramod Srinivas | ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಪ್ರಮೋದ್ ಶ್ರೀನಿವಾಸ್ ನೇಮಕ

ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲಾ ಭಾರತೀಯ ಜನತಾ ಪಕ್ಷದ (ಬಿಜೆಪಿ) ಯುವ ಮೋರ್ಚಾ ಅಧ್ಯಕ್ಷರಾಗಿ ಪ್ರಮೋದ್ ಶ್ರೀನಿವಾಸ್ ಅವರನ್ನು ನೇಮಕ ಮಾಡಲಾಗಿದೆ. ಇತ್ತೀಚೆಗಷ್ಟೇ ಪ್ರಮೋದ್ ಶ್ರೀನಿವಾಸ್ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ಶಿಷ್ಯ ಬಳಗದಲ್ಲಿ ಗುರುತಿಸಿಕೊಂಡಿದ್ದ ಪ್ರಮೋದ್ ಶ್ರೀನಿವಾಸ್, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ಆಂತರಿಕ ಬೆಳವಣಿಗೆಗಳಿಂದ ಅಸಮಾಧಾನಗೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದೀಗ ಮತ್ತೆ ಬಿಜೆಪಿಗೆ ಮರಳಿರುವ ಪ್ರಮೋದ್ ಶ್ರೀನಿವಾಸ್ ಅವರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದ್ದು, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಪಕ್ಷಕ್ಕೆ ಮರಳಿದ ಕೆಲವೇ ದಿನಗಳಲ್ಲಿ ಪ್ರಮುಖ ಜವಾಬ್ದಾರಿ ದೊರೆತಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಯುವ ಮೋರ್ಚಾ ಅಧ್ಯಕ್ಷರಾಗಿ ಪ್ರಮೋದ್ ಶ್ರೀನಿವಾಸ್ ಅವರು ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಹಾಗೂ ಯುವ ಕಾರ್ಯಕರ್ತರನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.

B Nagendra | ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ; ಸುದ್ದಿಗೋಷ್ಠಿಯಲ್ಲಿ ಕಣ್ಣೀರು!

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಮತ್ತೆ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿದ್ದು, ಈ ವಿವಾದದ ನಡುವೆಯೇ ಸಚಿವ ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ನಾಗೇಂದ್ರ, ಮಾತನಾಡುವ ವೇಳೆ ಭಾವುಕರಾಗಿ ಕಣ್ಣೀರಿಟ್ಟರು. ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ ನಾಗೇಂದ್ರ, ತಾನು ಯಾವುದೇ ತಪ್ಪು ಮಾಡಿಲ್ಲ, ರಾಜಕೀಯವಾಗಿ ತನ್ನನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡದಂತೆ ಸೂಚಿಸಿದ್ದರೂ, ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ತಾನು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದರು. ಏನಿದು ವಾಲ್ಮೀಕಿ ನಿಗಮದ ಹಗರಣ?ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ಸೇರಿದ ಹಣದ ಅಕ್ರಮ ವರ್ಗಾವಣೆ ಪ್ರಕರಣವು 2024ರಲ್ಲಿ ಬೆಳಕಿಗೆ ಬಂದಿತ್ತು. ನಿಗಮದ ಅಧಿಕಾರಿ ಪಿ. ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಸಿಕ್ಕಿದ ಡೆತ್ ನೋಟ್‌ನಲ್ಲಿ ಹಣಕಾಸಿನ ಅಕ್ರಮಗಳ ಬಗ್ಗೆ ಆರೋಪಗಳು ಕೇಳಿಬಂದಿದ್ದವು. ತನಿಖಾ ಸಂಸ್ಥೆಗಳ ಪ್ರಕಾರ, ನಿಗಮದ ಖಾತೆಯಿಂದ ಸುಮಾರು ₹89.63 ಕೋಟಿ ಹಣವನ್ನು ನಕಲಿ ದಾಖಲೆಗಳು ಹಾಗೂ ಬ್ಯಾಂಕಿಂಗ್ ಸೂಚನೆಗಳ ಮೂಲಕ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬ ಆರೋಪವಿದೆ. ನಂತರ ಈ ಹಣವನ್ನು ಹಲವು ಖಾತೆಗಳ ಮೂಲಕ ವರ್ಗಾವಣೆ ಮಾಡಿ ನಗದು, ಚಿನ್ನಾಭರಣ ಸೇರಿದಂತೆ ವಿವಿಧ ರೂಪಗಳಲ್ಲಿ ಬಳಸಲಾಗಿದೆ ಎಂದು ತನಿಖಾ ಸಂಸ್ಥೆಗಳು ಹೇಳಿವೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವೂ ತನಿಖೆ ನಡೆಸಿದ್ದು, 2024ರಲ್ಲಿ ಸಲ್ಲಿಸಿದ ತನ್ನ ಪ್ರಾಸಿಕ್ಯೂಷನ್ ದೂರಿನಲ್ಲಿ ಬಿ. ನಾಗೇಂದ್ರ ಅವರ ಹೆಸರನ್ನು ಪ್ರಮುಖ ಆರೋಪಿಯಾಗಿ ಉಲ್ಲೇಖಿಸಿತ್ತು. ಆದರೆ, ಇವು ತನಿಖಾ ಸಂಸ್ಥೆಗಳ ಆರೋಪಗಳಾಗಿದ್ದು, ನ್ಯಾಯಾಲಯದಲ್ಲಿ ಅಂತಿಮವಾಗಿ ಸಾಬೀತಾಗಬೇಕಿದೆ. ರೆಡ್ಡಿ–ಶ್ರೀರಾಮುಲುಗೆ ನಾಗೇಂದ್ರ ಸವಾಲ್ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿದ್ದ ನಾಗೇಂದ್ರ, ತಮ್ಮ ವಿರುದ್ಧ ರಾಜಕೀಯವಾಗಿ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಹೇಳುತ್ತಾ, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದರು. ತಮ್ಮ ವಿರುದ್ಧ ಮಾಡಲಾಗುತ್ತಿರುವ ಆರೋಪಗಳಿಗೆ ದಾಖಲೆಗಳೊಂದಿಗೆ ಉತ್ತರ ನೀಡುವುದಾಗಿ ಸವಾಲು ಹಾಕಿದರು. ವಾಲ್ಮೀಕಿ ಹಗರಣದ ಆರೋಪದ ನಡುವೆ ಮತ್ತೊಮ್ಮೆ ರಾಜೀನಾಮೆ ನೀಡಿದ ನಾಗೇಂದ್ರ; ಕಣ್ಣೀರಿನ ನಡುವೆ ರಾಜಕೀಯ ಎದುರಾಳಿಗಳಿಗೆ ನೇರ ಸವಾಲ್ — ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾದ ಬೆಳವಣಿಗೆ!

error: Content is protected !!