25 Years of PM Modi | ಪ್ರಧಾನಿ ನರೇಂದ್ರ ಮೋದಿ ಜನ್ಮದಿನ: ಸೆ. 17ರಂದು ‘ಆಶೀರ್ವಾದದ ದೀಪ’ ಬೆಳಗಿಸಲು ಬಿಜೆಪಿ ಕರ್ನಾಟಕ ರಾಜ್ಯದ ಕರೆ

ಪ್ರಧಾನಿ ನರೇಂದ್ರ ಮೋದಿ ಜನ್ಮದಿನ: ಸೆ. 17ರಂದು ‘ಆಶೀರ್ವಾದದ ದೀಪ’ ಬೆಳಗಿಸಲು ಬಿಜೆಪಿ ಕರ್ನಾಟಕ ರಾಜ್ಯದ ಕರೆ ಬೆಂಗಳೂರು: ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸೆಪ್ಟೆಂಬರ್‌ 17ರಂದು ‘ಸೇವಾ ಸಂಕಲ್ಪ ಅಭಿಯಾನ’ದಡಿ ರಾಜ್ಯದ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ‘ಆಶೀರ್ವಾದದ ದೀಪ’ ಬೆಳಗಿಸುವಂತೆ ಬಿಜೆಪಿ ಕರ್ನಾಟಕ ರಾಜ್ಯ ಮನವಿ ಮಾಡಿದೆ. ದೇಶದ ಪ್ರಗತಿ ಮತ್ತು ಜನಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಲ್ಲಿಸಿರುವ ಸೇವೆಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರಿಗೆ ಭಗವಂತನು ದೀರ್ಘಾಯುಷ್ಯ, ಉತ್ತಮ ಆರೋಗ್ಯ ಹಾಗೂ ದೇಶ ಸೇವೆಗೆ ಇನ್ನಷ್ಟು ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುವಂತೆ ಪಕ್ಷ ತಿಳಿಸಿದೆ. ಸೆಪ್ಟೆಂಬರ್‌ 17ರಂದು ಸಂಜೆ ಮನೆಗಳಲ್ಲಿ ‘ಆಶೀರ್ವಾದದ ದೀಪ’ ಬೆಳಗಿಸುವ ಮೂಲಕ ಸೇವಾ ಸಂಕಲ್ಪ ಅಭಿಯಾನದಲ್ಲಿ ಭಾಗವಹಿಸಿ, ಪ್ರಧಾನಮಂತ್ರಿಯವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಬಿಜೆಪಿ ಕರ್ನಾಟಕ ರಾಜ್ಯ ಕರೆ ನೀಡಿದೆ.

Satish Jarkiholi | ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ED ದಾಳಿ – ಕೋಟಿ ಕೋಟಿ ಹಣ, ಆಫ್ರಿಕಾ ಚಿನ್ನದ ಗಣಿಗಳ ಹೂಡಿಕೆ ಕುರಿತು ಸ್ಫೋಟಕ ಆರೋಪ!

ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ನಿವಾಸ ಹಾಗೂ ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದೆ ಎಂಬ ಮಾಹಿತಿ ಭಾರೀ ಸಂಚಲನ ಮೂಡಿಸಿದೆ.ED ಹೇಳಿಕೆಯ ಪ್ರಕಾರ, ₹3.3 ಕೋಟಿ ಭಾರತೀಯ ಕರೆನ್ಸಿ, 15 ಲಕ್ಷ ಡಾಲರ್ ಹಾಗೂ ಯುರೋ ಕರೆನ್ಸಿ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ, ಆಫ್ರಿಕಾದ ಪ್ರಮುಖ ಚಿನ್ನದ ಗಣಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಹಾಗೂ ಶೇ.40ರಷ್ಟು ಪಾಲುದಾರಿಕೆ ಹೊಂದಿರುವ ಕುರಿತು ತನಿಖೆಯಲ್ಲಿ ಮಾಹಿತಿ ಬಹಿರಂಗವಾಗಿದೆ ಎಂಬ ಆರೋಪ ಕೇಳಿಬಂದಿದೆ.ಸತೀಶ್ ಜಾರಕಿಹೊಳಿ ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ಆಫ್ರಿಕಾದ ಚಿನ್ನದ ಗಣಿಗಳನ್ನು ಖರೀದಿಸಲಾಗಿದೆ ಎಂಬ ಆರೋಪವೂ ED ತನಿಖೆಯಲ್ಲಿ ಉಲ್ಲೇಖವಾಗಿದೆ ಎಂದು ವರದಿಯಾಗಿದೆ. BVEPL ಸೇರಿದಂತೆ ಕೆಲವು ಕಂಪನಿಗಳಿಗೆ PWD ಇಲಾಖೆಯಿಂದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಟೆಂಡರ್‌ಗಳನ್ನು ನೀಡಲಾಗಿದ್ದು, ಅದರಿಂದ ಪಡೆದಿದ್ದರೆನ್ನಲಾದ ಅಕ್ರಮ ಹಣವನ್ನು ಆಫ್ರಿಕಾದ ಚಿನ್ನದ ಗಣಿಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂಬ ಗಂಭೀರ ಆರೋಪಗಳೂ ಕೇಳಿಬಂದಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ED ತನಿಖೆ ಮುಂದುವರಿದಿದ್ದು, ಮತ್ತಷ್ಟು ಸ್ಫೋಟಕ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ.

DK Shivakumar ನೂರು ದಿನಗಳ ಆಡಳಿತ: 4 ಜನಪರ ಯೋಜನೆಗಳಿಗೆ ಚಾಲನೆ | Kannadigara Vani

ಬೆಂಗಳೂರು: ಸರ್ಕಾರದ ನೂರು ದಿನಗಳ ಆಡಳಿತ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ನಡೆದ ‘ದೃಢ ಕರ್ನಾಟಕದ ಸಂಕಲ್ಪ – ಶತಕದ ಪಥ, ಪ್ರಗತಿಯ ರಥ’ ಕಾರ್ಯಕ್ರಮದಲ್ಲಿ ನಾಲ್ಕು ಪ್ರಮುಖ ಜನಪರ ಯೋಜನೆಗಳಿಗೆ ಚಾಲನೆ ನೀಡಲಾಯಿತು. ನಾಗರಿಕರಿಗೆ ತ್ವರಿತ ಸರ್ಕಾರಿ ಸೇವೆ ಒದಗಿಸುವ ‘ಸೇವೆ ಒನ್’, ರೈತರ ಸಬಲೀಕರಣಕ್ಕಾಗಿ ‘ರೈತ ಚೈತನ್ಯ’, ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆಗೆ ‘ಶಾಲೆಗಳ CSR ಪೋರ್ಟಲ್’ ಹಾಗೂ ವಿದ್ಯಾರ್ಥಿಗಳಿಗಾಗಿ ‘ಉಚಿತ ಬಸ್ ಪಾಸ್’ ಯೋಜನೆಗಳು ಜಾರಿಗೆ ಬಂದಿವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸೇರಿದಂತೆ ಸಚಿವರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

DK Shivakumar | “ಮಗ ವಕೀಲನಾಗಬೇಕು ಎಂದಿದ್ದೆ” ಎಂದ ಡಿಕೆಶಿ; ಸಭೆಯಲ್ಲಿ ನಗೆಗಡಲು!

ಬೆಂಗಳೂರು: ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಮಗನ ಕುರಿತು ಹೇಳಿದ ಮಾತುಗಳು ಸಭೆಯಲ್ಲಿ ನಗೆ ಮೂಡಿಸಿದವು.“ನನಗೆ ಮೂರು ಜನ ಮಕ್ಕಳು. ನನ್ನನ್ನು ರಕ್ಷಣೆ ಮಾಡಲಾದರೂ ನೀನು ವಕೀಲನಾಗಬೇಕು ಎಂದು ಮಗನಿಗೆ ಹೇಳಿದ್ದೆ. ಇತ್ತೀಚಿಗಷ್ಟೇ ಕಾನೂನು ಪದವಿ ವ್ಯಾಸಂಗ ಮುಗಿಸಿದ್ದಾನೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.ಇದೇ ವೇಳೆ ನ್ಯಾಯಾಂಗದ ಘನತೆ ಕಾಪಾಡುವಂತೆ ನ್ಯಾಯಾಧೀಶರಿಗೆ ಕರೆ ನೀಡಿದ ಅವರು, “ನ್ಯಾಯದ ಕುರ್ಚಿಯಿಂದ ಅನ್ಯಾಯ ಹರಿಯಬಾರದು. ಅದಕ್ಕೆ ನೀವು ಆಸ್ಪದ ಕೊಡುವುದಿಲ್ಲ ಎಂಬ ನಂಬಿಕೆ ನನಗಿದೆ” ಎಂದರು.ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವ ಮುನ್ನವೇ ಮಾಧ್ಯಮಗಳಲ್ಲಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಮಾಧ್ಯಮಗಳ ವಿಚಾರಣೆಯ ಪ್ರಭಾವಕ್ಕೆ ನ್ಯಾಯಾಂಗ ವ್ಯವಸ್ಥೆ ಒಳಗಾಗಬಾರದು ಎಂದು ಮನವಿ ಮಾಡಿದರು.ಕರ್ನಾಟಕದ ನ್ಯಾಯಾಂಗ ವ್ಯವಸ್ಥೆ ದೇಶದಲ್ಲೇ ಪ್ರಬಲ ಹಾಗೂ ಖ್ಯಾತಿ ಪಡೆದಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್, ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‌ಗೆ ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಕಲಿಯಲು ಬರುತ್ತಾರೆ ಎಂದು ಹೇಳಿದರು. ಈ ಮಾತಿಗೆ ಸಭೆಯಲ್ಲಿ ಭಾರಿ ಕರತಾಡನ ಕೇಳಿಬಂತು.

Tejasvi Surya | ಟನಲ್‌ ರಸ್ತೆ ಈಗ ‘ಮಹಿಳಾ ಸಬಲೀಕರಣ’ ಯೋಜನೆಯೇ?; ಡಿ.ಕೆ. ಶಿವಕುಮಾರ್‌ಗೆ ತೇಜಸ್ವಿ ಸೂರ್ಯ ಪ್ರಶ್ನೆ! Kannadigara Vani

ಬೆಂಗಳೂರು: ಟನಲ್‌ ರಸ್ತೆ ಯೋಜನೆ ಇದೀಗ ‘ಮಹಿಳಾ ಸಬಲೀಕರಣ’ ಯೋಜನೆಯಾಗಿ ಬದಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ. ಟನಲ್‌ ರಸ್ತೆ ಯೋಜನೆಗೆ ಮಹಿಳಾ ಉದ್ಯಮಿಗಳು ಬೆಂಬಲ ನೀಡಬೇಕು ಎಂದು ಮುಖ್ಯಮಂತ್ರಿ ಹೇಳಿರುವುದನ್ನು ಉಲ್ಲೇಖಿಸಿರುವ ತೇಜಸ್ವಿ ಸೂರ್ಯ, ‘ಮಹಿಳಾ ಸಬಲೀಕರಣದ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ, ಮೊದಲು ತಮ್ಮದೇ ಸಚಿವ ಸಂಪುಟದಲ್ಲಿ ಕನಿಷ್ಠ ಒಬ್ಬ ಮಹಿಳೆಗೆ ಸ್ಥಾನ ನೀಡಬಹುದಲ್ಲವೇ?’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಪ್ರತಿ ವಾರವೂ ಈ ಯೋಜನೆಯನ್ನು ಸಮರ್ಥಿಸಲು ಹೊಸಹೊಸ ಕಾರಣಗಳನ್ನು ನೀಡಲಾಗುತ್ತಿದೆ. ಆರಂಭದಲ್ಲಿ ಬೆಂಗಳೂರಿಗೆ ಹೆಚ್ಚು ರಸ್ತೆಗಳು ಹಾಗೂ ಕಾರುಗಳ ಅಗತ್ಯವಿದೆ, ಇಲ್ಲದಿದ್ದರೆ ಪುರುಷರಿಗೆ ಮದುವೆಗೆ ಹುಡುಗಿಯರು ಸಿಗುವುದಿಲ್ಲ ಎಂಬ ರೀತಿಯಲ್ಲಿ ಯೋಜನೆಯನ್ನು ಸಮರ್ಥಿಸಲಾಗಿತ್ತು. ಇದೀಗ ಅದಕ್ಕೆ ‘ಮಹಿಳಾ ಸಬಲೀಕರಣ’ದ ಹೆಸರನ್ನು ನೀಡಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ. ‘ಮುಂದೆ ರಾಷ್ಟ್ರೀಯ ಭದ್ರತೆಯ ಹೆಸರನ್ನೂ ನೀಡಬಹುದೇ? ರಾಜ್ಯದ ರಹಸ್ಯ ದಾಖಲೆಗಳನ್ನು ಭೂಗತವಾಗಿ ಸಾಗಿಸಲು ಟನಲ್‌ ನಿರ್ಮಿಸುತ್ತಿದ್ದೇವೆ ಎಂದು ಹೇಳಬಹುದೇ?’ ಎಂದು ತೇಜಸ್ವಿ ಸೂರ್ಯ ವ್ಯಂಗ್ಯವಾಡಿದ್ದಾರೆ. ಕೆಟ್ಟ ಯೋಜನೆಯನ್ನು ಸಮರ್ಥಿಸಲು ಹೊಸಹೊಸ ಕಾರಣಗಳನ್ನು ಹುಡುಕುವ ಆತುರವೇ ಇದೀಗ ಯೋಜನೆಗಿಂತ ಹೆಚ್ಚು ಮನರಂಜನೀಯವಾಗಿದೆ ಎಂದು ಅವರು ಟೀಕಿಸಿದ್ದಾರೆ.

B Y Vijayendra | ರೈತರ ಹಕ್ಕಿಗಾಗಿ ‘ಬಳ್ಳಾರಿ ಚಲೋ’: 190ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ವಿಜಯೇಂದ್ರ ಆಗ್ರಹ | Kannadigara Vani

ಮಸ್ಕಿ: ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಮುಂದುವರಿದಿದೆ. ಮಸ್ಕಿಯ ಗುಡದೂರಿನಿಂದ ಆರಂಭಗೊಂಡ ಪಾದಯಾತ್ರೆಯ ಮೂರನೇ ದಿನದ ನಡಿಗೆಯಲ್ಲಿ ದಾರಿಯುದ್ದಕ್ಕೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಪಾದಯಾತ್ರೆಯ ಸಂದರ್ಭದಲ್ಲಿ ತಾಲೂಕಿನ ಪಾಂಡುರಂಗ ಕ್ಯಾಂಪ್‌ಗೆ ಭೇಟಿ ನೀಡಿದ ವಿಜಯೇಂದ್ರ, ಗದ್ದೆಯಲ್ಲಿ ಭತ್ತದ ಸಸಿ ನೆಡುತ್ತಿದ್ದ ರೈತರು ಹಾಗೂ ಮಹಿಳಾ ಕೃಷಿ ಕಾರ್ಮಿಕರೊಂದಿಗೆ ಕೆಲಕಾಲ ಕಳೆದರು. ರೈತರೊಂದಿಗೆ ಜಮೀನಿಗಿಳಿದು ಸಾಂಕೇತಿಕವಾಗಿ ಭತ್ತದ ಸಸಿ ನೆಡುವ ಕಾರ್ಯದಲ್ಲೂ ಅವರು ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಬರ, ರಾಜ್ಯ ಸರ್ಕಾರದ ನಿರ್ಲಕ್ಷ್ಯ ಸೇರಿದಂತೆ ಹಲವು ಸವಾಲುಗಳ ನಡುವೆಯೂ ರೈತರು ಕೃಷಿಯನ್ನೇ ನಂಬಿ ದುಡಿಯುತ್ತಿದ್ದಾರೆ. ಅನ್ನದಾತರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವವರೆಗೂ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಪಾದಯಾತ್ರೆಗೆ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಯುವಜನರಿಂದ ವ್ಯಕ್ತವಾಗುತ್ತಿರುವ ಬೆಂಬಲವು ಹೋರಾಟಕ್ಕೆ ಮತ್ತಷ್ಟು ಬಲ ನೀಡಿದೆ ಎಂದು ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣ ಪರಿಹಾರ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿರುವ ವಿಜಯೇಂದ್ರ, 190ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು ಹಾಗೂ ₹5 ಲಕ್ಷದವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ರೈತರು ಮತ್ತು ಶ್ರಮಿಕರ ಹಕ್ಕುಗಳಿಗಾಗಿ ನಡೆಯುತ್ತಿರುವ ಈ ಜನಾಂದೋಲನದ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ವಿಜಯೇಂದ್ರ ಹೇಳಿದ್ದಾರೆ.

GS Patil | ಕಾಂಗ್ರೆಸ್ ರಾಜ್ಯ ಉಸ್ತುವಾರಿಯನ್ನು ಭೇಟಿಯಾದ ಸ್ಪೀಕರ್ ಜಿ.ಎಸ್. ಪಾಟೀಲ್ | Kannadigara Vani

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಸ್ಪೀಕರ್ ಜಿ.ಎಸ್. ಪಾಟೀಲ್ ಅವರು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸಭಾಧ್ಯಕ್ಷ ಸ್ಥಾನವು ಸಾಂವಿಧಾನಿಕ ಹಾಗೂ ನಿಷ್ಪಕ್ಷಪಾತ ಹುದ್ದೆಯಾಗಿದ್ದು, ಸ್ಪೀಕರ್‌ರ ಈ ಭೇಟಿಯ ಕುರಿತು ಪ್ರತಿಪಕ್ಷಗಳು ಪ್ರಶ್ನೆಗಳನ್ನು ಎತ್ತುವ ಸಾಧ್ಯತೆ ಇದೆ. ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸುವಾಗ ಪಕ್ಷಾತೀತ ನಿಲುವು ಕಾಯ್ದುಕೊಳ್ಳಬೇಕಾದ ಹಿನ್ನೆಲೆಯಲ್ಲಿ ಈ ಭೇಟಿ ಎಷ್ಟು ಸೂಕ್ತ? ಎಂಬ ಚರ್ಚೆ ಇದೀಗ ಮುನ್ನೆಲೆಗೆ ಬಂದಿದೆ. ಸ್ಪೀಕರ್ ಮತ್ತು ಕಾಂಗ್ರೆಸ್ ರಾಜ್ಯ ಉಸ್ತುವಾರಿ ನಡುವಿನ ಭೇಟಿಯ ಉದ್ದೇಶವೇನು ಎಂಬುದರ ಕುರಿತು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿದೆ.

PM Narendra Modi | ಪಿಎಂ ಸ್ವನಿಧಿಯಿಂದ ನಿಂಗಮ್ಮ ಅವರ ವ್ಯಾಪಾರಕ್ಕೆ ಹೊಸ ಚೈತನ್ಯ

ಬೆಂಗಳೂರು: ಪಿಎಂ ಸ್ವನಿಧಿ ಯೋಜನೆಯ ನೆರವಿನಿಂದ ಬೆಂಗಳೂರಿನ ಬೀದಿ ವ್ಯಾಪಾರಿ ಟಿ.ಎಸ್. ನಿಂಗಮ್ಮ ಅವರು ತಮ್ಮ ವ್ಯಾಪಾರವನ್ನು ವಿಸ್ತರಿಸಿಕೊಂಡಿದ್ದಾರೆ. ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ನಿಂಗಮ್ಮ ಅವರ ಯಶೋಗಾಥೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ. ನಿಂಗಮ್ಮ ಅವರು ಆರಂಭದಲ್ಲಿ ₹10,000 ಸಾಲ ಪಡೆದು, ಬಳಿಕ ₹20,000 ಹಾಗೂ ₹50,000 ಸಾಲ ಪಡೆದು ವ್ಯಾಪಾರವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಿದ್ದಾರೆ. ಸಾಲವನ್ನು ಸಕಾಲದಲ್ಲಿ ಮರುಪಾವತಿಸುವ ಮೂಲಕ ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಂಡಿದ್ದಾರೆ. ನಿಂಗಮ್ಮ ಅವರ ಯಶೋಗಾಥೆ ಪಿಎಂ ಸ್ವನಿಧಿ ಯೋಜನೆಯ ಪ್ರಯೋಜನ ಪಡೆದ ಬೀದಿ ವ್ಯಾಪಾರಿಗಳಿಗೆ ಉತ್ತಮ ಉದಾಹರಣೆಯಾಗಿದೆ.

Pramod Srinivas | ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಪ್ರಮೋದ್ ಶ್ರೀನಿವಾಸ್ ನೇಮಕ

ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲಾ ಭಾರತೀಯ ಜನತಾ ಪಕ್ಷದ (ಬಿಜೆಪಿ) ಯುವ ಮೋರ್ಚಾ ಅಧ್ಯಕ್ಷರಾಗಿ ಪ್ರಮೋದ್ ಶ್ರೀನಿವಾಸ್ ಅವರನ್ನು ನೇಮಕ ಮಾಡಲಾಗಿದೆ. ಇತ್ತೀಚೆಗಷ್ಟೇ ಪ್ರಮೋದ್ ಶ್ರೀನಿವಾಸ್ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ಶಿಷ್ಯ ಬಳಗದಲ್ಲಿ ಗುರುತಿಸಿಕೊಂಡಿದ್ದ ಪ್ರಮೋದ್ ಶ್ರೀನಿವಾಸ್, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ಆಂತರಿಕ ಬೆಳವಣಿಗೆಗಳಿಂದ ಅಸಮಾಧಾನಗೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದೀಗ ಮತ್ತೆ ಬಿಜೆಪಿಗೆ ಮರಳಿರುವ ಪ್ರಮೋದ್ ಶ್ರೀನಿವಾಸ್ ಅವರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದ್ದು, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಪಕ್ಷಕ್ಕೆ ಮರಳಿದ ಕೆಲವೇ ದಿನಗಳಲ್ಲಿ ಪ್ರಮುಖ ಜವಾಬ್ದಾರಿ ದೊರೆತಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಯುವ ಮೋರ್ಚಾ ಅಧ್ಯಕ್ಷರಾಗಿ ಪ್ರಮೋದ್ ಶ್ರೀನಿವಾಸ್ ಅವರು ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಹಾಗೂ ಯುವ ಕಾರ್ಯಕರ್ತರನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.

ಜೆಡಿಎಸ್ ಚಿಕ್ಕಬಳ್ಳಾಪುರ ಜಿಲ್ಲಾ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾಧ್ಯಕ್ಷರಾಗಿ ಅಕಿಲ್ ರೆಡ್ಡಿ ಮರು ಆಯ್ಕೆ

ಚಿಕ್ಕಬಳ್ಳಾಪುರ: ಬೆಂಗಳೂರಿನ ಜೆಪಿ ಭವನದಲ್ಲಿ ಇಂದು ನಡೆದ ಕರ್ನಾಟಕ ಪ್ರದೇಶ ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ, ಚಿಕ್ಕಬಳ್ಳಾಪುರ ಜಿಲ್ಲಾ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾಧ್ಯಕ್ಷರಾಗಿ ಅಕಿಲ್ ರೆಡ್ಡಿ, ಜೀಡಮಾಕಲಹಳ್ಳಿ ಅವರನ್ನು ಮತ್ತೊಮ್ಮೆ ಮರು ಆಯ್ಕೆ ಮಾಡಲಾಗಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಮೇಲಿನ ಅಭಿಮಾನ, ನಾಯಕರ ಮೇಲಿನ ನಿಷ್ಠೆ ಹಾಗೂ ಸಂಘಟನೆಗಾಗಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಮತ್ತೊಮ್ಮೆ ಮಹತ್ತರ ಜವಾಬ್ದಾರಿ ನೀಡಿರುವುದಕ್ಕೆ ಅಕಿಲ್ ರೆಡ್ಡಿ ಅವರು ಪಕ್ಷದ ವರಿಷ್ಠರಾದ ಹೆಚ್.ಡಿ. ದೇವೇಗೌಡರು, ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ರಾಜ್ಯ ಯುವನಾಯಕ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಕೋರ್ ಕಮಿಟಿ ರಾಜ್ಯಾಧ್ಯಕ್ಷ ಜೆ.ಕೆ. ಕೃಷ್ಣಾರೆಡ್ಡಿ, ಮಹಿಳಾ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಮುನಿಯಪ್ಪ, ತಿಪ್ಪೇಸ್ವಾಮಿ, ರಮೇಶ್ ಗೌಡ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯಾಧ್ಯಕ್ಷ ಚಂದನ್ ಗೌಡ ಸೇರಿದಂತೆ ಪಕ್ಷದ ಹಿರಿಯ ನಾಯಕರು ಹಾಗೂ ಮುಖಂಡರಿಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. “ಪದವಿ ಸಿಕ್ಕಿರುವುದಕ್ಕೆ ಹೆಮ್ಮೆಪಡುವುದಕ್ಕಿಂತ, ಪಕ್ಷದ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ಸಿಕ್ಕಿರುವುದೇ ನನ್ನ ಹೆಮ್ಮೆ” ಎಂದು ಅಕಿಲ್ ರೆಡ್ಡಿ ತಿಳಿಸಿದ್ದಾರೆ.

error: Content is protected !!