Part in Pink 5.0 Rotaract JP Nagar

Party in Pink 5.0 | ‘ಪಾರ್ಟಿ ಇನ್ ಪಿಂಕ್ 5.0’: ಸ್ತನ ಕ್ಯಾನ್ಸರ್ ಜಾಗೃತಿಗಾಗಿ ₹3 ಲಕ್ಷ ನಿಧಿ ಸಂಗ್ರಹಿಸಿದ ರೋಟರ‍್ಯಾಕ್ಟ್ ಕ್ಲಬ್

ರೋಟರ‍್ಯಾಕ್ಟ್ ಕ್ಲಬ್ ಆಫ್ ಬೆಂಗಳೂರು ಜೆ.ಪಿ. ನಗರ ವತಿಯಿಂದ ಅಕ್ಟೋಬರ್ 11ರಂದು ಜಯನಗರ 4ನೇ ಟಿ ಬ್ಲಾಕ್‌ನ ಎಸ್.ಎಸ್.ಎಂ.ಆರ್.ವಿ. ಕಾಲೇಜಿನಲ್ಲಿ ಕ್ಲಬ್‌ನ ಪ್ರಮುಖ ಜುಂಬಾ ನಿಧಿ ಸಂಗ್ರಹ ಕಾರ್ಯಕ್ರಮದ ಐದನೇ ಆವೃತ್ತಿ ‘ಪಾರ್ಟಿ ಇನ್ ಪಿಂಕ್ 5.0’ ಆಯೋಜಿಸಲಾಗಿತ್ತು. ಬೆಳಿಗ್ಗೆ 7.30ರಿಂದ ನಡೆದ ಈ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದು, ಕ್ಯಾನ್ಸರ್ ಚಿಕಿತ್ಸೆ ಮತ್ತು ಸ್ತನ ಕ್ಯಾನ್ಸರ್ ಸಂಶೋಧನೆಗೆ ಬೆಂಬಲವಾಗಿ ₹3 ಲಕ್ಷ ಸಂಗ್ರಹಿಸಲಾಯಿತು. ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ, ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯ ಲಭ್ಯತೆಗೆ ಉತ್ತೇಜನ ನೀಡುವ ಉದ್ದೇಶದ ಈ ಕಾರ್ಯಕ್ರಮಕ್ಕೆ ಯೋಜನಾ ಅಧ್ಯಕ್ಷ ಮನೀಶ್ ಎಸ್. ಚಿಕ್ಕಮಠ ಅವರು ನೇತೃತ್ವ ವಹಿಸಿದ್ದರು; ಕಾರ್ತಿಕ್ ಎಂ.ಎಸ್. ಮತ್ತು ದೃಷ್ಟಿ ಮಿಶ್ರಾ ಸಹ ಅಧ್ಯಕ್ಷರಾಗಿದ್ದರು. ರೋಟರಿ ಇಂಟರ್‌ನ್ಯಾಷನಲ್ ಜಿಲ್ಲೆ 3191ರ ನಿಯೋಜಿತ ಜಿಲ್ಲಾ ಗವರ್ನರ್ ಡಾ. ಹರಿಣಿ ರವೀಂದ್ರನಾಥ್, ಲೆಫ್ಟಿನೆಂಟ್ ಕಮಾಂಡರ್ ಸಂಜಯ್ ವೆಂಕಟೇಶ್ (ನಿವೃತ್ತ), ‘ಕೆಜಿಎಫ್’ ಚಿತ್ರದ ಹಾಡುಗಳಿಗೆ ಧ್ವನಿಯಾದ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ವಿಜೇತ ಹಿನ್ನೆಲೆ ಗಾಯಕಿ ಅನನ್ಯಾ ಭಟ್ ಹಾಗೂ ಸ್ತನ ಕ್ಯಾನ್ಸರ್ ಮತ್ತು ಟ್ಯೂಮರ್ ಬಯಾಲಜಿಯಲ್ಲಿ ಪರಿಣತರಾದ ಕನ್ಸಲ್ಟೆಂಟ್ ಸರ್ಜಿಕಲ್ ಆಂಕಾಲಜಿಸ್ಟ್ ಡಾ. ಕನ್ಯಾಧರ ಲೋಹಿತ ಕೃಷ್ಣ ಅತಿಥಿಗಳಾಗಿ ಭಾಗವಹಿಸಿದ್ದರು. 2021ರಲ್ಲಿ ರೋಟರಿ ಇಂಟರ್‌ನ್ಯಾಷನಲ್ ಜಿಲ್ಲೆ 3191ರ ಅಡಿ ಸ್ಥಾಪನೆಯಾದ ಈ ಕ್ಲಬ್, ಯುವಜನರು ಮುನ್ನಡೆಸುವ ಸೇವಾ ಸಂಸ್ಥೆ. ಇದುವರೆಗೆ ಆರೋಗ್ಯ, ಶಿಕ್ಷಣ, ಮುಟ್ಟಿನ ನೈರ್ಮಲ್ಯ ಮತ್ತು ಪರಿಸರ ಕ್ಷೇತ್ರಗಳಲ್ಲಿ 300ಕ್ಕೂ ಹೆಚ್ಚು ಯೋಜನೆಗಳನ್ನು ಕೈಗೊಂಡು, 7,500ಕ್ಕೂ ಹೆಚ್ಚು ಸ್ವಯಂಸೇವಾ ಗಂಟೆಗಳನ್ನು ನೀಡಿದೆ. ಸುಮಾರು 40 ಪ್ರಶಸ್ತಿಗಳೂ ಲಭಿಸಿವೆ.

error: Content is protected !!