DK Shivakumar | ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಅಧಿಕೃತವಾಗಿ ಆಚರಿಸಲು ಸರ್ಕಾರಕ್ಕೆ ಮನವಿ

ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಅಧಿಕೃತವಾಗಿ ಆಚರಿಸಲು ಸರ್ಕಾರಕ್ಕೆ ಮನವಿ ಕಲಬುರಗಿ: ದ್ವೈತ ಸಿದ್ಧಾಂತದ ಪ್ರತಿಪಾದಕರಾದ ಶ್ರೀ ಜಗದ್ಗುರು ಮಧ್ವಾಚಾರ್ಯರ ಜಯಂತಿಯನ್ನು ಕರ್ನಾಟಕ ಸರ್ಕಾರದ ವತಿಯಿಂದ ಅಧಿಕೃತವಾಗಿ ಆಚರಿಸುವಂತೆ ಜಿಲ್ಲಾ ಬ್ರಾಹ್ಮಣ ಸಂಘ, ಕಲಬುರಗಿ ವತಿಯಿಂದ ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಗೌರವಪೂರ್ವಕವಾಗಿ ಮನವಿ ಸಲ್ಲಿಸಲಾಯಿತು. ಕಲಬುರಗಿಗೆ ಆಗಮಿಸಿದ್ದ ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು, ಶ್ರೀ ಮಧ್ವಾಚಾರ್ಯರ ತತ್ತ್ವ, ಜ್ಞಾನ ಮತ್ತು ಭಕ್ತಿ ಪರಂಪರೆಯ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಅವರ ದಾರ್ಶನಿಕ ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ಜಯಂತಿಯನ್ನು ಸರ್ಕಾರದ ವತಿಯಿಂದ ಅಧಿಕೃತವಾಗಿ ಆಚರಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಹಿರಿಯ ಮುಖಂಡರು ಹಾಗೂ ಸಮಾಜದ ಗಣ್ಯರು ಉಪಸ್ಥಿತರಿದ್ದರು.

Satish Jarkiholi | ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ED ದಾಳಿ – ಕೋಟಿ ಕೋಟಿ ಹಣ, ಆಫ್ರಿಕಾ ಚಿನ್ನದ ಗಣಿಗಳ ಹೂಡಿಕೆ ಕುರಿತು ಸ್ಫೋಟಕ ಆರೋಪ!

ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ನಿವಾಸ ಹಾಗೂ ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದೆ ಎಂಬ ಮಾಹಿತಿ ಭಾರೀ ಸಂಚಲನ ಮೂಡಿಸಿದೆ.ED ಹೇಳಿಕೆಯ ಪ್ರಕಾರ, ₹3.3 ಕೋಟಿ ಭಾರತೀಯ ಕರೆನ್ಸಿ, 15 ಲಕ್ಷ ಡಾಲರ್ ಹಾಗೂ ಯುರೋ ಕರೆನ್ಸಿ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ, ಆಫ್ರಿಕಾದ ಪ್ರಮುಖ ಚಿನ್ನದ ಗಣಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಹಾಗೂ ಶೇ.40ರಷ್ಟು ಪಾಲುದಾರಿಕೆ ಹೊಂದಿರುವ ಕುರಿತು ತನಿಖೆಯಲ್ಲಿ ಮಾಹಿತಿ ಬಹಿರಂಗವಾಗಿದೆ ಎಂಬ ಆರೋಪ ಕೇಳಿಬಂದಿದೆ.ಸತೀಶ್ ಜಾರಕಿಹೊಳಿ ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ಆಫ್ರಿಕಾದ ಚಿನ್ನದ ಗಣಿಗಳನ್ನು ಖರೀದಿಸಲಾಗಿದೆ ಎಂಬ ಆರೋಪವೂ ED ತನಿಖೆಯಲ್ಲಿ ಉಲ್ಲೇಖವಾಗಿದೆ ಎಂದು ವರದಿಯಾಗಿದೆ. BVEPL ಸೇರಿದಂತೆ ಕೆಲವು ಕಂಪನಿಗಳಿಗೆ PWD ಇಲಾಖೆಯಿಂದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಟೆಂಡರ್‌ಗಳನ್ನು ನೀಡಲಾಗಿದ್ದು, ಅದರಿಂದ ಪಡೆದಿದ್ದರೆನ್ನಲಾದ ಅಕ್ರಮ ಹಣವನ್ನು ಆಫ್ರಿಕಾದ ಚಿನ್ನದ ಗಣಿಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂಬ ಗಂಭೀರ ಆರೋಪಗಳೂ ಕೇಳಿಬಂದಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ED ತನಿಖೆ ಮುಂದುವರಿದಿದ್ದು, ಮತ್ತಷ್ಟು ಸ್ಫೋಟಕ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ.

DK Shivakumar ನೂರು ದಿನಗಳ ಆಡಳಿತ: 4 ಜನಪರ ಯೋಜನೆಗಳಿಗೆ ಚಾಲನೆ | Kannadigara Vani

ಬೆಂಗಳೂರು: ಸರ್ಕಾರದ ನೂರು ದಿನಗಳ ಆಡಳಿತ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ನಡೆದ ‘ದೃಢ ಕರ್ನಾಟಕದ ಸಂಕಲ್ಪ – ಶತಕದ ಪಥ, ಪ್ರಗತಿಯ ರಥ’ ಕಾರ್ಯಕ್ರಮದಲ್ಲಿ ನಾಲ್ಕು ಪ್ರಮುಖ ಜನಪರ ಯೋಜನೆಗಳಿಗೆ ಚಾಲನೆ ನೀಡಲಾಯಿತು. ನಾಗರಿಕರಿಗೆ ತ್ವರಿತ ಸರ್ಕಾರಿ ಸೇವೆ ಒದಗಿಸುವ ‘ಸೇವೆ ಒನ್’, ರೈತರ ಸಬಲೀಕರಣಕ್ಕಾಗಿ ‘ರೈತ ಚೈತನ್ಯ’, ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆಗೆ ‘ಶಾಲೆಗಳ CSR ಪೋರ್ಟಲ್’ ಹಾಗೂ ವಿದ್ಯಾರ್ಥಿಗಳಿಗಾಗಿ ‘ಉಚಿತ ಬಸ್ ಪಾಸ್’ ಯೋಜನೆಗಳು ಜಾರಿಗೆ ಬಂದಿವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸೇರಿದಂತೆ ಸಚಿವರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

DK Shivakumar | “ಮಗ ವಕೀಲನಾಗಬೇಕು ಎಂದಿದ್ದೆ” ಎಂದ ಡಿಕೆಶಿ; ಸಭೆಯಲ್ಲಿ ನಗೆಗಡಲು!

ಬೆಂಗಳೂರು: ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಮಗನ ಕುರಿತು ಹೇಳಿದ ಮಾತುಗಳು ಸಭೆಯಲ್ಲಿ ನಗೆ ಮೂಡಿಸಿದವು.“ನನಗೆ ಮೂರು ಜನ ಮಕ್ಕಳು. ನನ್ನನ್ನು ರಕ್ಷಣೆ ಮಾಡಲಾದರೂ ನೀನು ವಕೀಲನಾಗಬೇಕು ಎಂದು ಮಗನಿಗೆ ಹೇಳಿದ್ದೆ. ಇತ್ತೀಚಿಗಷ್ಟೇ ಕಾನೂನು ಪದವಿ ವ್ಯಾಸಂಗ ಮುಗಿಸಿದ್ದಾನೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.ಇದೇ ವೇಳೆ ನ್ಯಾಯಾಂಗದ ಘನತೆ ಕಾಪಾಡುವಂತೆ ನ್ಯಾಯಾಧೀಶರಿಗೆ ಕರೆ ನೀಡಿದ ಅವರು, “ನ್ಯಾಯದ ಕುರ್ಚಿಯಿಂದ ಅನ್ಯಾಯ ಹರಿಯಬಾರದು. ಅದಕ್ಕೆ ನೀವು ಆಸ್ಪದ ಕೊಡುವುದಿಲ್ಲ ಎಂಬ ನಂಬಿಕೆ ನನಗಿದೆ” ಎಂದರು.ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವ ಮುನ್ನವೇ ಮಾಧ್ಯಮಗಳಲ್ಲಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಮಾಧ್ಯಮಗಳ ವಿಚಾರಣೆಯ ಪ್ರಭಾವಕ್ಕೆ ನ್ಯಾಯಾಂಗ ವ್ಯವಸ್ಥೆ ಒಳಗಾಗಬಾರದು ಎಂದು ಮನವಿ ಮಾಡಿದರು.ಕರ್ನಾಟಕದ ನ್ಯಾಯಾಂಗ ವ್ಯವಸ್ಥೆ ದೇಶದಲ್ಲೇ ಪ್ರಬಲ ಹಾಗೂ ಖ್ಯಾತಿ ಪಡೆದಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್, ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‌ಗೆ ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಕಲಿಯಲು ಬರುತ್ತಾರೆ ಎಂದು ಹೇಳಿದರು. ಈ ಮಾತಿಗೆ ಸಭೆಯಲ್ಲಿ ಭಾರಿ ಕರತಾಡನ ಕೇಳಿಬಂತು.

Tejasvi Surya | ಟನಲ್‌ ರಸ್ತೆ ಈಗ ‘ಮಹಿಳಾ ಸಬಲೀಕರಣ’ ಯೋಜನೆಯೇ?; ಡಿ.ಕೆ. ಶಿವಕುಮಾರ್‌ಗೆ ತೇಜಸ್ವಿ ಸೂರ್ಯ ಪ್ರಶ್ನೆ! Kannadigara Vani

ಬೆಂಗಳೂರು: ಟನಲ್‌ ರಸ್ತೆ ಯೋಜನೆ ಇದೀಗ ‘ಮಹಿಳಾ ಸಬಲೀಕರಣ’ ಯೋಜನೆಯಾಗಿ ಬದಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ. ಟನಲ್‌ ರಸ್ತೆ ಯೋಜನೆಗೆ ಮಹಿಳಾ ಉದ್ಯಮಿಗಳು ಬೆಂಬಲ ನೀಡಬೇಕು ಎಂದು ಮುಖ್ಯಮಂತ್ರಿ ಹೇಳಿರುವುದನ್ನು ಉಲ್ಲೇಖಿಸಿರುವ ತೇಜಸ್ವಿ ಸೂರ್ಯ, ‘ಮಹಿಳಾ ಸಬಲೀಕರಣದ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ, ಮೊದಲು ತಮ್ಮದೇ ಸಚಿವ ಸಂಪುಟದಲ್ಲಿ ಕನಿಷ್ಠ ಒಬ್ಬ ಮಹಿಳೆಗೆ ಸ್ಥಾನ ನೀಡಬಹುದಲ್ಲವೇ?’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಪ್ರತಿ ವಾರವೂ ಈ ಯೋಜನೆಯನ್ನು ಸಮರ್ಥಿಸಲು ಹೊಸಹೊಸ ಕಾರಣಗಳನ್ನು ನೀಡಲಾಗುತ್ತಿದೆ. ಆರಂಭದಲ್ಲಿ ಬೆಂಗಳೂರಿಗೆ ಹೆಚ್ಚು ರಸ್ತೆಗಳು ಹಾಗೂ ಕಾರುಗಳ ಅಗತ್ಯವಿದೆ, ಇಲ್ಲದಿದ್ದರೆ ಪುರುಷರಿಗೆ ಮದುವೆಗೆ ಹುಡುಗಿಯರು ಸಿಗುವುದಿಲ್ಲ ಎಂಬ ರೀತಿಯಲ್ಲಿ ಯೋಜನೆಯನ್ನು ಸಮರ್ಥಿಸಲಾಗಿತ್ತು. ಇದೀಗ ಅದಕ್ಕೆ ‘ಮಹಿಳಾ ಸಬಲೀಕರಣ’ದ ಹೆಸರನ್ನು ನೀಡಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ. ‘ಮುಂದೆ ರಾಷ್ಟ್ರೀಯ ಭದ್ರತೆಯ ಹೆಸರನ್ನೂ ನೀಡಬಹುದೇ? ರಾಜ್ಯದ ರಹಸ್ಯ ದಾಖಲೆಗಳನ್ನು ಭೂಗತವಾಗಿ ಸಾಗಿಸಲು ಟನಲ್‌ ನಿರ್ಮಿಸುತ್ತಿದ್ದೇವೆ ಎಂದು ಹೇಳಬಹುದೇ?’ ಎಂದು ತೇಜಸ್ವಿ ಸೂರ್ಯ ವ್ಯಂಗ್ಯವಾಡಿದ್ದಾರೆ. ಕೆಟ್ಟ ಯೋಜನೆಯನ್ನು ಸಮರ್ಥಿಸಲು ಹೊಸಹೊಸ ಕಾರಣಗಳನ್ನು ಹುಡುಕುವ ಆತುರವೇ ಇದೀಗ ಯೋಜನೆಗಿಂತ ಹೆಚ್ಚು ಮನರಂಜನೀಯವಾಗಿದೆ ಎಂದು ಅವರು ಟೀಕಿಸಿದ್ದಾರೆ.

B Y Vijayendra | ರೈತರ ಹಕ್ಕಿಗಾಗಿ ‘ಬಳ್ಳಾರಿ ಚಲೋ’: 190ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ವಿಜಯೇಂದ್ರ ಆಗ್ರಹ | Kannadigara Vani

ಮಸ್ಕಿ: ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಮುಂದುವರಿದಿದೆ. ಮಸ್ಕಿಯ ಗುಡದೂರಿನಿಂದ ಆರಂಭಗೊಂಡ ಪಾದಯಾತ್ರೆಯ ಮೂರನೇ ದಿನದ ನಡಿಗೆಯಲ್ಲಿ ದಾರಿಯುದ್ದಕ್ಕೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಪಾದಯಾತ್ರೆಯ ಸಂದರ್ಭದಲ್ಲಿ ತಾಲೂಕಿನ ಪಾಂಡುರಂಗ ಕ್ಯಾಂಪ್‌ಗೆ ಭೇಟಿ ನೀಡಿದ ವಿಜಯೇಂದ್ರ, ಗದ್ದೆಯಲ್ಲಿ ಭತ್ತದ ಸಸಿ ನೆಡುತ್ತಿದ್ದ ರೈತರು ಹಾಗೂ ಮಹಿಳಾ ಕೃಷಿ ಕಾರ್ಮಿಕರೊಂದಿಗೆ ಕೆಲಕಾಲ ಕಳೆದರು. ರೈತರೊಂದಿಗೆ ಜಮೀನಿಗಿಳಿದು ಸಾಂಕೇತಿಕವಾಗಿ ಭತ್ತದ ಸಸಿ ನೆಡುವ ಕಾರ್ಯದಲ್ಲೂ ಅವರು ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಬರ, ರಾಜ್ಯ ಸರ್ಕಾರದ ನಿರ್ಲಕ್ಷ್ಯ ಸೇರಿದಂತೆ ಹಲವು ಸವಾಲುಗಳ ನಡುವೆಯೂ ರೈತರು ಕೃಷಿಯನ್ನೇ ನಂಬಿ ದುಡಿಯುತ್ತಿದ್ದಾರೆ. ಅನ್ನದಾತರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವವರೆಗೂ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಪಾದಯಾತ್ರೆಗೆ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಯುವಜನರಿಂದ ವ್ಯಕ್ತವಾಗುತ್ತಿರುವ ಬೆಂಬಲವು ಹೋರಾಟಕ್ಕೆ ಮತ್ತಷ್ಟು ಬಲ ನೀಡಿದೆ ಎಂದು ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣ ಪರಿಹಾರ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿರುವ ವಿಜಯೇಂದ್ರ, 190ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು ಹಾಗೂ ₹5 ಲಕ್ಷದವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ರೈತರು ಮತ್ತು ಶ್ರಮಿಕರ ಹಕ್ಕುಗಳಿಗಾಗಿ ನಡೆಯುತ್ತಿರುವ ಈ ಜನಾಂದೋಲನದ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ವಿಜಯೇಂದ್ರ ಹೇಳಿದ್ದಾರೆ.

GS Patil | ಕಾಂಗ್ರೆಸ್ ರಾಜ್ಯ ಉಸ್ತುವಾರಿಯನ್ನು ಭೇಟಿಯಾದ ಸ್ಪೀಕರ್ ಜಿ.ಎಸ್. ಪಾಟೀಲ್ | Kannadigara Vani

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಸ್ಪೀಕರ್ ಜಿ.ಎಸ್. ಪಾಟೀಲ್ ಅವರು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸಭಾಧ್ಯಕ್ಷ ಸ್ಥಾನವು ಸಾಂವಿಧಾನಿಕ ಹಾಗೂ ನಿಷ್ಪಕ್ಷಪಾತ ಹುದ್ದೆಯಾಗಿದ್ದು, ಸ್ಪೀಕರ್‌ರ ಈ ಭೇಟಿಯ ಕುರಿತು ಪ್ರತಿಪಕ್ಷಗಳು ಪ್ರಶ್ನೆಗಳನ್ನು ಎತ್ತುವ ಸಾಧ್ಯತೆ ಇದೆ. ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸುವಾಗ ಪಕ್ಷಾತೀತ ನಿಲುವು ಕಾಯ್ದುಕೊಳ್ಳಬೇಕಾದ ಹಿನ್ನೆಲೆಯಲ್ಲಿ ಈ ಭೇಟಿ ಎಷ್ಟು ಸೂಕ್ತ? ಎಂಬ ಚರ್ಚೆ ಇದೀಗ ಮುನ್ನೆಲೆಗೆ ಬಂದಿದೆ. ಸ್ಪೀಕರ್ ಮತ್ತು ಕಾಂಗ್ರೆಸ್ ರಾಜ್ಯ ಉಸ್ತುವಾರಿ ನಡುವಿನ ಭೇಟಿಯ ಉದ್ದೇಶವೇನು ಎಂಬುದರ ಕುರಿತು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿದೆ.

Pramod Srinivas | ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಪ್ರಮೋದ್ ಶ್ರೀನಿವಾಸ್ ನೇಮಕ

ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲಾ ಭಾರತೀಯ ಜನತಾ ಪಕ್ಷದ (ಬಿಜೆಪಿ) ಯುವ ಮೋರ್ಚಾ ಅಧ್ಯಕ್ಷರಾಗಿ ಪ್ರಮೋದ್ ಶ್ರೀನಿವಾಸ್ ಅವರನ್ನು ನೇಮಕ ಮಾಡಲಾಗಿದೆ. ಇತ್ತೀಚೆಗಷ್ಟೇ ಪ್ರಮೋದ್ ಶ್ರೀನಿವಾಸ್ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ಶಿಷ್ಯ ಬಳಗದಲ್ಲಿ ಗುರುತಿಸಿಕೊಂಡಿದ್ದ ಪ್ರಮೋದ್ ಶ್ರೀನಿವಾಸ್, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ಆಂತರಿಕ ಬೆಳವಣಿಗೆಗಳಿಂದ ಅಸಮಾಧಾನಗೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದೀಗ ಮತ್ತೆ ಬಿಜೆಪಿಗೆ ಮರಳಿರುವ ಪ್ರಮೋದ್ ಶ್ರೀನಿವಾಸ್ ಅವರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದ್ದು, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಪಕ್ಷಕ್ಕೆ ಮರಳಿದ ಕೆಲವೇ ದಿನಗಳಲ್ಲಿ ಪ್ರಮುಖ ಜವಾಬ್ದಾರಿ ದೊರೆತಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಯುವ ಮೋರ್ಚಾ ಅಧ್ಯಕ್ಷರಾಗಿ ಪ್ರಮೋದ್ ಶ್ರೀನಿವಾಸ್ ಅವರು ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಹಾಗೂ ಯುವ ಕಾರ್ಯಕರ್ತರನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.

B Nagendra | ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ; ಸುದ್ದಿಗೋಷ್ಠಿಯಲ್ಲಿ ಕಣ್ಣೀರು!

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಮತ್ತೆ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿದ್ದು, ಈ ವಿವಾದದ ನಡುವೆಯೇ ಸಚಿವ ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ನಾಗೇಂದ್ರ, ಮಾತನಾಡುವ ವೇಳೆ ಭಾವುಕರಾಗಿ ಕಣ್ಣೀರಿಟ್ಟರು. ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ ನಾಗೇಂದ್ರ, ತಾನು ಯಾವುದೇ ತಪ್ಪು ಮಾಡಿಲ್ಲ, ರಾಜಕೀಯವಾಗಿ ತನ್ನನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡದಂತೆ ಸೂಚಿಸಿದ್ದರೂ, ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ತಾನು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದರು. ಏನಿದು ವಾಲ್ಮೀಕಿ ನಿಗಮದ ಹಗರಣ?ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ಸೇರಿದ ಹಣದ ಅಕ್ರಮ ವರ್ಗಾವಣೆ ಪ್ರಕರಣವು 2024ರಲ್ಲಿ ಬೆಳಕಿಗೆ ಬಂದಿತ್ತು. ನಿಗಮದ ಅಧಿಕಾರಿ ಪಿ. ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಸಿಕ್ಕಿದ ಡೆತ್ ನೋಟ್‌ನಲ್ಲಿ ಹಣಕಾಸಿನ ಅಕ್ರಮಗಳ ಬಗ್ಗೆ ಆರೋಪಗಳು ಕೇಳಿಬಂದಿದ್ದವು. ತನಿಖಾ ಸಂಸ್ಥೆಗಳ ಪ್ರಕಾರ, ನಿಗಮದ ಖಾತೆಯಿಂದ ಸುಮಾರು ₹89.63 ಕೋಟಿ ಹಣವನ್ನು ನಕಲಿ ದಾಖಲೆಗಳು ಹಾಗೂ ಬ್ಯಾಂಕಿಂಗ್ ಸೂಚನೆಗಳ ಮೂಲಕ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬ ಆರೋಪವಿದೆ. ನಂತರ ಈ ಹಣವನ್ನು ಹಲವು ಖಾತೆಗಳ ಮೂಲಕ ವರ್ಗಾವಣೆ ಮಾಡಿ ನಗದು, ಚಿನ್ನಾಭರಣ ಸೇರಿದಂತೆ ವಿವಿಧ ರೂಪಗಳಲ್ಲಿ ಬಳಸಲಾಗಿದೆ ಎಂದು ತನಿಖಾ ಸಂಸ್ಥೆಗಳು ಹೇಳಿವೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವೂ ತನಿಖೆ ನಡೆಸಿದ್ದು, 2024ರಲ್ಲಿ ಸಲ್ಲಿಸಿದ ತನ್ನ ಪ್ರಾಸಿಕ್ಯೂಷನ್ ದೂರಿನಲ್ಲಿ ಬಿ. ನಾಗೇಂದ್ರ ಅವರ ಹೆಸರನ್ನು ಪ್ರಮುಖ ಆರೋಪಿಯಾಗಿ ಉಲ್ಲೇಖಿಸಿತ್ತು. ಆದರೆ, ಇವು ತನಿಖಾ ಸಂಸ್ಥೆಗಳ ಆರೋಪಗಳಾಗಿದ್ದು, ನ್ಯಾಯಾಲಯದಲ್ಲಿ ಅಂತಿಮವಾಗಿ ಸಾಬೀತಾಗಬೇಕಿದೆ. ರೆಡ್ಡಿ–ಶ್ರೀರಾಮುಲುಗೆ ನಾಗೇಂದ್ರ ಸವಾಲ್ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿದ್ದ ನಾಗೇಂದ್ರ, ತಮ್ಮ ವಿರುದ್ಧ ರಾಜಕೀಯವಾಗಿ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಹೇಳುತ್ತಾ, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದರು. ತಮ್ಮ ವಿರುದ್ಧ ಮಾಡಲಾಗುತ್ತಿರುವ ಆರೋಪಗಳಿಗೆ ದಾಖಲೆಗಳೊಂದಿಗೆ ಉತ್ತರ ನೀಡುವುದಾಗಿ ಸವಾಲು ಹಾಕಿದರು. ವಾಲ್ಮೀಕಿ ಹಗರಣದ ಆರೋಪದ ನಡುವೆ ಮತ್ತೊಮ್ಮೆ ರಾಜೀನಾಮೆ ನೀಡಿದ ನಾಗೇಂದ್ರ; ಕಣ್ಣೀರಿನ ನಡುವೆ ರಾಜಕೀಯ ಎದುರಾಳಿಗಳಿಗೆ ನೇರ ಸವಾಲ್ — ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾದ ಬೆಳವಣಿಗೆ!

Siddaramaiah | ಕಾಂಗ್ರೆಸ್‌ನಲ್ಲಿ ‘ಗೇಮ್’ ಶುರು? Kannadigara Vani

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಇತ್ತೀಚಿನ ಬೆಳವಣಿಗೆಗಳು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರಿಸಿದ ಬಳಿಕ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್‌ನ ಹಲವು ನಾಯಕರೊಂದಿಗೆ ಸಿದ್ದರಾಮಯ್ಯ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕೆಲ ನಾಯಕರ ಭೇಟಿಗೂ ನಿರಾಕರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರಿಂದ ಸಿದ್ದರಾಮಯ್ಯ ಮುಂದಿನ ರಾಜಕೀಯ ನಡೆ ಏನು ಎಂಬ ಪ್ರಶ್ನೆ ಮೂಡಿದೆ. ಇದರ ನಡುವೆ ಇತ್ತೀಚೆಗೆ ಖಾಸಗಿ ಹೋಟೆಲ್‌ನಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಿದ್ದರಾಮಯ್ಯ ಭೇಟಿಯಾಗಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿತ್ತು. ಆದರೆ ಈ ಭೇಟಿಗೆ ಸಂಬಂಧಿಸಿದ ಯಾವುದೇ ಅಧಿಕೃತ ಫೋಟೋಗಳು ಹೊರಬಂದಿರಲಿಲ್ಲ. ಆದರೆ ಇದೀಗ ಸರಣಿ ರಾಜಕೀಯ ಭೇಟಿಗಳು ಕುತೂಹಲಕ್ಕೆ ಕಾರಣವಾಗಿವೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಸಿದ್ದರಾಮಯ್ಯ ಭೇಟಿಯಾಗಿರುವುದು ಗಮನ ಸೆಳೆದಿದೆ. ಭೇಟಿ ಆಕಸ್ಮಿಕವಾಗಿದ್ದರೂ, ಇಬ್ಬರು ಹಿರಿಯ ನಾಯಕರ ಭೇಟಿಗೆ ರಾಜಕೀಯ ಮಹತ್ವ ಕಲ್ಪಿಸಲಾಗುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕ ಸಿ.ಟಿ. ರವಿ ಅವರು ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ‘ಕಾವೇರಿ’ಗೆ ತೆರಳಿ ಮಾತುಕತೆ ನಡೆಸಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಉಭಯ ಪಕ್ಷಗಳ ನಾಯಕರು ಭೇಟಿಯಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆದಿರಬಹುದು ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಇದೇ ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಿದ್ದರಾಮಯ್ಯ ಭೇಟಿಯಾಗಿರುವುದು ಕೂಡ ಗಮನ ಸೆಳೆದಿದೆ. ಇಬ್ಬರೂ ಉಭಯ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಈ ಭೇಟಿಯ ಹಿಂದಿನ ರಾಜಕೀಯ ಲೆಕ್ಕಾಚಾರವೇನು ಎಂಬ ಪ್ರಶ್ನೆ ಮೂಡಿದೆ. “ರಾಜಕಾರಣದಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಶಾಶ್ವತ ಮಿತ್ರರೂ ಇಲ್ಲ” ಎಂಬ ಮಾತಿನಂತೆ, ಸಿದ್ದರಾಮಯ್ಯ ಅವರ ಇತ್ತೀಚಿನ ರಾಜಕೀಯ ಸಂಪರ್ಕಗಳು ಹೊಸ ಸಮೀಕರಣದ ಮುನ್ಸೂಚನೆಯೇ ಎಂಬ ಚರ್ಚೆ ಜೋರಾಗಿದೆ. ಸಿದ್ದರಾಮಯ್ಯ ಯಾವುದಾದರೂ ರಾಜಕೀಯ ದಾಳ ಉರುಳಿಸಲು ಸಿದ್ಧತೆ ನಡೆಸುತ್ತಿದ್ದಾರಾ? ಅಥವಾ ಇವೆಲ್ಲವೂ ಕೇವಲ ಕಾಕತಾಳೀಯ ಭೇಟಿಗಳೇ? ಮುಂದಿನ ಬೆಳವಣಿಗೆಗಳೇ ಇದಕ್ಕೆ ಉತ್ತರ ನೀಡಬೇಕಿದೆ.  

error: Content is protected !!