MB Patil : ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಕೇಂದ್ರದ ನಿರ್ಲಕ್ಷ್ಯ ಖಂಡನೀಯ: ಎಂ.ಬಿ. ಪಾಟೀಲ್

ಬೆಂಗಳೂರು: ದೇಶದ 7 ಪ್ರಮುಖ ರೈಲ್ವೆ ಮಾರ್ಗಗಳನ್ನು ಚತುಷ್ಪಥಗೊಳಿಸುವ ಕೇಂದ್ರದ ಯೋಜನೆಯಲ್ಲಿ ಕರ್ನಾಟಕದ ಯಾವುದೇ ಮಾರ್ಗ ಸೇರಿಸದಿರುವುದಕ್ಕೆ ಸಚಿವ ಎಂ.ಬಿ. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಪ್ರಮುಖ ರೈಲ್ವೆ ಮಾರ್ಗಗಳಾದ ಬೆಂಗಳೂರು–ವಿಜಯಪುರ, ಬೆಂಗಳೂರು–ಹುಬ್ಬಳ್ಳಿ, ಬೆಂಗಳೂರು–ಮಂಗಳೂರು, ಬೆಂಗಳೂರು–ಚೆನ್ನೈ ಸೇರಿದಂತೆ ಪ್ರಮುಖ ಮಾರ್ಗಗಳನ್ನು ಹಂತ ಹಂತವಾಗಿ ಚತುಷ್ಪಥಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ತುಮಕೂರು–ದಾವಣಗೆರೆ ರೈಲು ಮಾರ್ಗ ದ್ವಿಪಥಗೊಳಿಸುವುದು ಹಾಗೂ ರಾಜ್ಯದ ಹೈಸ್ಪೀಡ್ ರೈಲು ಯೋಜನೆಗಳಿಗೆ ಆದ್ಯತೆ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. “ಕರ್ನಾಟಕ ವಿಶೇಷ ಸವಲತ್ತು ಕೇಳುತ್ತಿಲ್ಲ; ನಮಗೆ ಸಲ್ಲಬೇಕಾದ ನ್ಯಾಯಯುತ ಪಾಲನ್ನು ಮಾತ್ರ ಕೇಳುತ್ತಿದ್ದೇವೆ. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ,” ಎಂದು ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದರು. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೇಂದ್ರಕ್ಕೆ ಪತ್ರ ಬರೆಯುವುದರ ಜೊತೆಗೆ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಸಹಾಯಕ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ಕರ್ನಾಟಕದ ರೈಲ್ವೆ ಹಕ್ಕುಗಳ ಕುರಿತು ಒಕ್ಕೊರಲಿನಿಂದ ಧ್ವನಿ ಎತ್ತುವುದಾಗಿ ತಿಳಿಸಿದರು.

Nikhil Kumaraswamy | 3 ಬಾರಿ ಸೋಲು, ಕುಟುಂಬ ರಾಜಕಾರಣದ ಆರೋಪ: ನಿಖಿಲ್ ಕುಮಾರಸ್ವಾಮಿ ಖಡಕ್ ಉತ್ತರ!

ರಾಮನಗರ: ಮೂರು ಬಾರಿ ಚುನಾವಣೆಯಲ್ಲಿ ಸೋತರೂ ರಾಜಕೀಯದಿಂದ ಹಿಂದೆ ಸರಿಯದ ನಿಖಿಲ್ ಕುಮಾರಸ್ವಾಮಿ, “ನಾನು ಸೋತಿರಬಹುದು, ಆದರೆ ಓಡಿ ಹೋಗುವ ವ್ಯಕ್ತಿಯಲ್ಲ. ಎಲ್ಲಿ ಸೋತಿದ್ದೀನೋ ಅಲ್ಲೇ ಮತ್ತೆ ಸ್ಪರ್ಧಿಸುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ. 2028ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದಲೇ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಬಿಡದಿ ಭೂಮಿ ವಿಚಾರದಲ್ಲೂ ಸರ್ಕಾರಕ್ಕೆ ತಿರುಗೇಟು ನೀಡಿದ ನಿಖಿಲ್, ಅಭಿವೃದ್ಧಿಗೆ ಜೆಡಿಎಸ್‌ ವಿರೋಧಿಯಲ್ಲ. ಸರ್ಕಾರ ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಸುಮಾರು ಒಂದೂವರೆ ಲಕ್ಷ ಎಕರೆ ಭೂಮಿಯನ್ನು ಬಳಸಿಕೊಂಡು ಅಲ್ಲೇ AI ಸಿಟಿ ನಿರ್ಮಿಸಲಿ. “ಬಿಡದಿಯ ಭೂಮಿಯೇ ಯಾಕೆ ಬೇಕು?” ಎಂದು ಪ್ರಶ್ನಿಸಿದ್ದಾರೆ. ಇನ್ನು ಕುಟುಂಬ ರಾಜಕಾರಣದ ಆರೋಪಕ್ಕೆ ಪ್ರತಿಕ್ರಿಯಿಸಿದ ನಿಖಿಲ್, ದೇಶದ ಬಹುತೇಕ ಪ್ರಾದೇಶಿಕ ಪಕ್ಷಗಳು ಕುಟುಂಬದೊಂದಿಗೆ ಬೆಸೆದುಕೊಂಡಿವೆ. ಕಾಂಗ್ರೆಸ್‌ನಲ್ಲೂ ಕುಟುಂಬ ರಾಜಕಾರಣದ ಚರ್ಚೆ ಇದೆ ಎಂದು ತಿರುಗೇಟು ನೀಡಿದ್ದಾರೆ. ನಾಗೇಂದ್ರ ರಾಜೀನಾಮೆ ವಿಚಾರದಲ್ಲೂ ವಿಪಕ್ಷಗಳ ಹೋರಾಟವನ್ನು ಸಮರ್ಥಿಸಿಕೊಂಡ ನಿಖಿಲ್, ನಾಗೇಂದ್ರ ತಪ್ಪು ಮಾಡಿರುವುದನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದರು. ಆರೋಪ ಎದುರಿಸುತ್ತಿದ್ದ ವ್ಯಕ್ತಿಯನ್ನು ಮತ್ತೆ ಸಚಿವರನ್ನಾಗಿ ಮಾಡಿದ್ದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದ ನಿಖಿಲ್, “CEO ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ರಿಯಲ್ ಎಸ್ಟೇಟ್ ವ್ಯವಹಾರದ ರೀತಿಯಲ್ಲಿ ಸರ್ಕಾರ ನಡೆಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ಮೂರು ಸೋಲುಗಳ ಬಳಿಕವೂ ಆತ್ಮವಿಶ್ವಾಸ ಕಳೆದುಕೊಳ್ಳದೆ, ಪ್ರಶ್ನೆಗಳಿಗೆ ನೇರ ಹಾಗೂ ಸ್ಪಷ್ಟ ಉತ್ತರ ನೀಡಿರುವ ನಿಖಿಲ್ ಅವರ ರಾಜಕೀಯ ಪಕ್ವತೆ ಇದೀಗ ಚರ್ಚೆಗೆ ಗ್ರಾಸವಾಗಿದೆ.

error: Content is protected !!